ಮೈಸೂರು : ಜಾತ್ಯತೀತ ಶಕ್ತಿಯನ್ನು ಕೊಲೆ ಮಾಡಿ ಜಾತಿವಾದಿ, ಕೋಮುವಾದಿ ಬಿಜೆಪಿ ಜೊತೆ ಮದುವೆ ಆಗುತ್ತೇನೆ ಅಂತಿದ್ದಾರೆ ಕುಮಾರಸ್ವಾಮಿ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಲೇವಡಿ ಮಾಡಿದ್ದಾರೆ. ಇಲ್ಲಿನ ಕಲಾಮಂದಿರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್‌ನ ರಾಜ್ಯಾಧ್ಯಕ್ಷನಾಗಿದ್ದರೆ, ಹೆಚ್.ಡಿ.ಕುಮಾರಸ್ವಾಮಿ ಅವರನ್ನು 6 ವರ್ಷ ಪಕ್ಷದಿಂದ ಅಮಾನತು ಮಾಡುತ್ತಿದ್ದೆ ಎಂದರು.
ಜೆಡಿಎಸ್ನಿಂದ ಹೆಚ್.ಡಿ.ಕುಮಾರಸ್ವಾಮಿ ಉಚ್ಚಾಟನೆ ಬಗ್ಗೆ ಇಬ್ರಾಹಿಂ ಹೇಳಿಕೆ ವಿಚಾರವಾಗಿ ಮಾತನಾಡಿ, ಸಿ.ಎಂ.ಇಬ್ರಾಹಿಂ ಸ್ಟ್ಯಾಂಡ್ ಸರಿಯಾಗಿದೆ. ಯಾರು ಕುಮಾರಸ್ವಾಮಿ ಅವರೊಂದಿಗೆ ಚಮಚಾಗಿರಿ ಮಾಡುತ್ತಾರೋ ಅವರು ಮೈತ್ರಿಗೆ ಒಪ್ಪುತ್ತಾರೆ ಅಷ್ಟೇ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಅಮಾನತು ಮಾಡುವ ಅಧಿಕಾರ ಇಬ್ರಾಹಿಂಗೆ ಇದ್ದೇ ಇದೆ ಎಂದು ಹೇಳಿದರು.
ಸಿ.ಎಂ.ಇಬ್ರಾಹಿಂ ತೆಗೆದುಕೊಂಡ ನಿಲುವು ರಾಜಕೀಯ ಹಿನ್ನೆಲೆಗೆ ಸರಿಯಾಗಿದೆ. ಸಿ.ಎಂ.ಇಬ್ರಾಹಿಂ ಅವರಿಗೆ ಉಚ್ಚಾಟನೆ ಮಾಡುವ ಅಧಿಕಾರವಿದೆ. ತಾವು ರಾಷ್ಟ್ರೀಯ ಅಧ್ಯಕ್ಷರಿಗೆ ವಿಧೇಯನಾಗಿರುತ್ತೇನೆ. ಕುಮಾರಸ್ವಾಮಿಗೂ ನನಗೂ ಸಂಬಂಧ ಇಲ್ಲ ಅನ್ನುವುದು ನಿಜ. ಕುಮಾರಸ್ವಾಮಿ ವೈಯಕ್ತಿಕವಾಗಿ ಮೈತ್ರಿ ಬಗ್ಗೆ ಮಾತಾಡಿಕೊಂಡಿದ್ದಾರೆ. ಜಾತ್ಯಾತೀತ ಅನ್ನೋ ಅರ್ಥವನ್ನೇ ತೆಗೆದು ಹಾಕಿದ್ದಾರೆ ಎಂದು ಕಿಡಿಕಾರಿದರು.
ಮೈಸೂರು ದಸರಾ ಅಧಿಕಾರಿಗಳ ದರ್ಬಾರ್: ದಸರಾ ದೀಪಾಲಂಕಾರ ಚೆನ್ನಾಗಿದೆ. ನಾನೂ ಕೂಡ ಏಳು ದಸರಾ ನಡೆಸಿದ್ದೇನೆ. ಯಾವ ಉಪಸಮಿತಿಯಲ್ಲಿ ಜನಪ್ರತಿನಿಧಿಗಳಿಲ್ಲ. ಸಂಪೂರ್ಣವಾಗಿ ದಸರಾ ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ ಎಂದು ಇದೇ ವೇಳೆ ಟೀಕಿಸಿದರು. ಸಾಹಿತ್ಯದಿಂದ ವಿಧಾನಪರಿಷತ್‌ಗೆ ನಾಮಂಕಿತನಾಗಿದ್ದೇನೆ. ನನ್ನನ್ನು ಹೇಗೆ ದಸರಾದಲ್ಲಿ ಬಳಸಿಕೊಳ್ಳಬೇಕಿತ್ತು? ಕಾರ್ಯಕ್ರಮಗಳು ಸರಿಯಾಗಿ ಆಗುತ್ತಿಲ್ಲ. ನಾವೂ ಹಿಂದೆ ಮಾಡಿದ್ದು ಬಿಟ್ಟರೆ ಹೊಸದೇನೂ ದಸರಾದಲ್ಲಿ ಆಗುತ್ತಿಲ್ಲ ಎಂದರು.
ಕಲಾವಿದರು ಕಾರ್ಯಕ್ರಮಗಳನ್ನು ಕೊಡೋದೇ ಧನ್ಯ ಅಂತಿದ್ದರು. ಹೋಗುವಾಗ ಗೌರವಧನ ಕೊಡುತ್ತಿದ್ದರು. ಆದ್ರೆ ಇವಾಗ ನೀನು ವಸಿ ತಕೋ ನಾನೂ ವಸಿ ತಕೋ ಅನ್ನುವ ಹಾಗಾಗಿದೆ. ಸಂಸ್ಕೃತಿ ಹಾಳುಮಾಡುವ ಕೆಲಸ ಆಗುತ್ತಿದೆ. ಪರೋಕ್ಷವಾಗಿ ಕಲಾವಿದರ ಹಣಕ್ಕೂ ಕಮಿಷನ್ ಕೊಡುವ ಪರಿಸ್ಥಿತಿ ಬಂದಿದೆ ಎಂದು ಅಸಮಾಧಾನ ಹೊರಹಾಕಿದರು.
ಇಬ್ರಾಹಿಂ ಹೇಳಿಕೆಗೆ ಕುಮಾರಸ್ವಾಮಿ ಗರಂ: ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರೇ ಒರಿಜಿನಲ್ ಅಂತಾ ಬೋರ್ಡ್ ಹಾಕ್ಕೊಳ್ರಪ್ಪ, ಅವರೇ ಒರಿಜಿನಲ್ ಅಂತಾ ಬರ್ಕೊಳ್ಳಿ ಎಂದರು. ನಗರದಲ್ಲಿ ಸೋಮವಾರ ನಡೆದ 'ಜೆಡಿಎಸ್ ಚಿಂತನ ಮಂಥನ' ಸಭೆಯಲ್ಲಿ ಸಿ.ಎಂ ಇಬ್ರಾಹಿಂ ನಮ್ಮದೇ ಒರಿಜಿನಲ್ ಜಾತ್ಯತೀತ ಜನತಾದಳ. ನಾನೇ ಅದರ ಅಧ್ಯಕ್ಷ. ಇದು ನನ್ನ ಮನೆ. ಮುಂದೇನಾಗುತ್ತದೆ ಎಂಬುದನ್ನು ಪರದೆ ಮೇಲೆ ನೋಡಿ ಎಂದಿದ್ದರು. ಈ ವಿಚಾರವಾಗಿ ಜೆ. ಪಿ ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ಡಿಕೆ, ನಿಮಗೆ ಅದು ದೊಡ್ಡದಾಗಿ ಕಾಣಿಸುತ್ತಿದೆ. ಏನು ಸರಿ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದಿದ್ದರು.
ಇದನ್ನೂ ಓದಿ: ಅವರೇ ಒರಿಜಿನಲ್ ಅಂತ ಬರೆದುಕೊಳ್ಳಿ: ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಹೆಚ್.ಡಿ.ಕುಮಾರಸ್ವಾಮಿ ಗರಂ