ಬೆಂಗಳೂರು : ಮೈಸೂರು ಡಿಪೋದಲ್ಲಿ ನಿರ್ವಾಹಕ ಬಸವರಾಜು ಆತ್ಮಹತ್ಯೆಗೆ ಯತ್ನಿಸಿದ್ದು ಅಧಿಕಾರಿಗಳ ಕಿರುಕುಳದಿಂದ ಅಲ್ಲ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ.

ಮೈಸೂರು ಗ್ರಾಮಾಂತರ ವಿಭಾಗದ ವೋಲ್ವೋ ಬಸ್ ಕಳೆದ ರಾತ್ರಿ ಉಡುಪಿಯಿಂದ ಮೈಸೂರಿಗೆ ಕಾರ್ಯಾಚರಣೆ ನಡೆಸುತ್ತಿತ್ತು. ಈ ವೇಳೆ ವಿಭಾಗೀಯ ತಪಾಸಣಾ ತಂಡದ ಸಿಬ್ಬಂದಿ ಪಿರಿಯಾಪಟ್ಟಣದ ಸಮೀಪ ಮುಂಜಾನೆ 4 ಗಂಟೆಗೆ ಟಿಕೆಟ್ ತಪಾಸಣೆ ನಡೆಸಿದ್ದಾರೆ. ಬಸ್ ನಲ್ಲಿ 22 ಪ್ರಯಾಣಿಕರು ಸಂಚಾರ ಮಾಡುತ್ತಿದ್ದರು ಆದರೆ ಕರ್ತವ್ಯದಲ್ಲಿದ್ದ ನಿರ್ವಾಹಕ ಬಸವರಾಜು, 371 ರೂ.ಗಳಂತೆ 5 ಜನ ಪ್ರಯಾಣಿಕರಿಂದ ಹಣ ಪಡೆದು ಟಿಕೆಟ್ ನೀಡದೇ ಇರುವುದು ತಪಾಸಣೆ ವೇಳೆ ಪತ್ತೆಯಾಗಿದೆ.
ಐವರು ಪ್ರಯಾಣಿಕರು ಕುಕ್ಕೆ ಸುಬ್ರಮಣ್ಯದಲ್ಲಿ ಬಸ್ ಹತ್ತಿ ಮೈಸೂರಿಗೆ ತೆರಳುತ್ತಿದ್ದರು ಅವರಿಂದ 1950 ರೂ.ಗಳನ್ನು ಸಂಗ್ರಹಿಸಿ ಟಿಕೆಟ್ ನೀಡಿದ ಸಂಸ್ಥೆಗೆ ನಷ್ಟವನ್ನುಂಟು ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ನಿರ್ವಾಹಕನ ವಿರುದ್ಧ ಪ್ರಕರಣ ದಾಖಲಿಸಿ ಆತನಿಗೆ ಸ್ಥಳದಲ್ಲಿಯೇ ಮೆಮೊ ನೀಡಲಾಗಿತ್ತು ಎಂದು ಮೆಮೋ ಪ್ರತಿಯನ್ನು ಕೆಎಸ್ ಆರ್ ಟಿಸಿ ಬಿಡುಗಡೆ ಮಾಡಿದೆ.
ತಪಾಸಣೆ ವೇಳೆ ಸಿಕ್ಕಿ ಬಿದ್ದು ಮೆಮೊ ಸ್ವೀಕರಿಸಿ ನಂತರ ಮೈಸೂರುಗೆ ಬಂದ ನಿರ್ವಾಹಕನ ವಿರುದ್ಧ ಗಂಭೀರ ಶಿಸ್ತು ಕ್ರಮ ಕೈಗೊಳ್ಳುವ ಆದೇಶ ನೀಡಿದ್ದರು ಇದಾದ ನಂತರವೇ ನಿರ್ವಾಹಕರ ವಿಶ್ರಾಂತ ಕೊಠಡಿಗೆ ತೆರಳಿ ಮಾತ್ರೆಗಳನ್ನು ತೆಗೆದುಕೊಂಡಿದ್ದಾರೆ. ಕೂಡಲೇ ಡಿಪೋ ಮ್ಯಾನೇಜರ್ ನಿರ್ವಾಹಕ ಬಸವರಾಜು ಅವರನ್ನು ಮೈಸೂರಿನ ಗೋಪಾಲ ಗೌಡ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸಧ್ಯ ಬಸವರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಈ ಘಟನೆ ನಡೆದಿರುವುದು ಮೇಲಾಧಿಕಾರಿಗಳ ಕಿರುಕುಳದಿಂದ ಅಲ್ಲ ಎಂದು ಕೆಎಸ್ ಆರ್ ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.