ಮೈಸೂರು : ಸಾಹಿತಿಗಳು ಸಮಾಜದ ಎಚ್ಚರಿಕೆಯ ಗುರುತುಗಳು. ಅವರಿಗೆ ಇತ್ತೀಚೆಗೆ ಬೆದರಿಕೆ ಬರುತ್ತಿದ್ದು, ರಕ್ಷಣೆ ಕೊಡುತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ದೊಡ್ಡತನ. ಇದಕ್ಕಾಗಿ ಎಲ್ಲಾ ಸಾಹಿತಿಗಳ ಪರವಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ತಿಳಿಸಿದರು.
ಶುಕ್ರವಾರ ಮೈಸೂರಿನ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆ.ಎಸ್.ಭಗವಾನ್, ನಂತರ ಈಟಿವಿ ಭಾರತ್ ಜೊತೆ ಮಾತನಾಡುತ್ತಾ, ಕಳೆದ ದಿನಗಳಿಂದ ಸಾಹಿತಿಗಳಿಗೆ ಬೆದರಿಕೆ ಪತ್ರಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅವರಿಗೆ ರಕ್ಷಣೆ ಕೊಡುವ ನಿರ್ಧಾರವನ್ನು ಮುಖ್ಯಮಂತ್ರಿಗಳು ಪ್ರಕಟಿಸಿರುವುದು ಒಳ್ಳೆಯ ನಿರ್ಧಾರ ಎಂದರು.
ಮೈಸೂರು ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಕುವೆಂಪು ನಗರದ ಉದಯರವಿ ರಸ್ತೆಯ ಹೆಸರು ಬದಲಾವಣೆ ಮಾಡಲು ಹೊರಟಿರುವುದು ಸರಿಯಲ್ಲ. ಈಗಾಗಲೇ ಕುವೆಂಪು ನಗರ ಬಡಾವಣೆಗಳಿಗೆ 42 ವರ್ಷಗಳಿಂದ ಉದಯರವಿ ಹೆಸರಿದ್ದು, ಬೆಂಗಳೂರು, ಮೈಸೂರು ಸೇರಿದಂತೆ ಎಲ್ಲಾ ಕಡೆ ಪರಿಚಿತವಾಗಿದೆ. ಉದಯರವಿ ಪ್ರಕಾಶನ ಹೆಸರಿನಲ್ಲಿ ಹಲವಾರು ಪುಸ್ತಕಗಳೂ ಹೊರಬಂದಿವೆ. ಈ ಹಿನ್ನೆಲೆಯಲ್ಲಿ ಕುವೆಂಪು ಸ್ಮರಣೆಯಲ್ಲಿರುವ ಉದಯರವಿ ರಸ್ತೆಯ ಹೆಸರನ್ನು ಬದಲು ಮಾಡಬೇಡಿ. ಇಲ್ಲಿ ರಾಷ್ಟ್ರಕವಿ ಕುವೆಂಪು ಅವರ ತಪಸ್ಸಿನ ಕೇಂದ್ರ ಉದಯರವಿ ಮನೆಯಿದೆ. ಅದು ಮುಂದೊಂದು ದಿನ ರಾಷ್ಟ್ರೀಯ ನೆನಪಿನ ಕೇಂದ್ರವಾಗಬಹುದು. ಆದ್ದರಿಂದ ಪಾಲಿಕೆಯಲ್ಲಿ ಚರ್ಚೆಗೆ ಬಂದ ಉದಯರವಿ ರಸ್ತೆಯ ಹೆಸರನ್ನು ಬದಲು ಮಾಡಬೇಡಿ ಎಂದು ಮನವಿ ಮಾಡುತ್ತೇನೆ ಎಂದು ಭಗವಾನ್ ಹೇಳಿದರು.
ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿರುವುದು ಸರಿ ಇದೆ. ಅದನ್ನು ನಾನು ಸ್ವಾಗತಿಸುತ್ತೇನೆ. ಗ್ಯಾರಂಟಿ ಯೋಜನೆಗಳ ಉದ್ದೇಶ ಬಡವರ ಉದ್ಧಾರ. ಅನೇಕ ಜನರಿಗೆ ಹೊಟ್ಟೆಗೆ ಊಟ ಮತ್ತು ಬಟ್ಟೆ ಇಲ್ಲ. ಅಂಥವರ ಬಗ್ಗೆ ಸಿಎಂ ಸಿದ್ದರಾಮಯ್ಯ ಗಮನಹರಿಸಿರುವುದು ಒಳ್ಳೆಯ ವಿಚಾರ. ಇದು ಅವರ ದೊಡ್ಡತನವನ್ನು ತೋರಿಸುತ್ತದೆ ಎಂದರು.
ಡಿಜಿ ಅಲೋಕ್ ಮೋಹನ್ ಆದೇಶ: ಸಾಹಿತಿ, ಲೇಖಕರು ಹಾಗೂ ಹೋರಾಟಗಾರರಿಗೆ ಅನಾಮಧೇಯ ಪತ್ರ ಕಳುಹಿಸಿ ಬೆದರಿಕೆ ಸಂದೇಶ ಬರುತ್ತಿರುವ ಪ್ರಕರಣ ತನಿಖೆಗಾಗಿ ವಿಶೇಷ ತಂಡ ರಚಿಸಿ ಎಸಿಪಿ ಮಟ್ಟದ ಅಧಿಕಾರಿಯನ್ನು ತನಿಖಾಧಿಕಾರಿಯಾಗಿ ನೇಮಿಸಬೇಕು. ಇದರ ಮೇಲ್ವಿಚಾರಣೆಯನ್ನು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ನೋಡಿಕೊಳ್ಳಬೇಕು. ನಗರ ಪೊಲೀಸ್ ಆಯುಕ್ತರು ಕಾಲಕಾಲಕ್ಕೆ ಪರಿಶೀಲಿಸಬೇಕು. ಆಯಾ ಜಿಲ್ಲಾಮಟ್ಟದ ಎಸ್ಪಿಗಳು ಪ್ರಕರಣಗಳನ್ನು ಹಸ್ತಾಂತರಿಸಿ ತನಿಖೆಗೆ ಬೇಕಾಗುವ ಮಾಹಿತಿ ನೀಡಿ ಸಹಕರಿಸಬೇಕು ಎಂದು ಡಿಜಿ ಅಲೋಕ್ ಮೋಹನ್ ಈಗಾಗಲೇ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ಸಾಹಿತಿಗಳಿಗೆ ಜೀವ ಬೆದರಿಕೆ ಹಿನ್ನೆಲೆ: ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ