ಮೈಸೂರು : ಪಂಜಾಬ್ನಿಂದ ಪ್ರಧಾನಿ ಮೋದಿ ವಾಪಸ್ ಹೋಗಲು ಸಮಾವೇಶದ ಖಾಲಿ ಚೇರುಗಳೇ ಕಾರಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ವ್ಯಂಗ್ಯವಾಡಿದರು.
ಜಲದರ್ಶಿನಿ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಂಜಾಬ್ ಸರ್ಕಾರ ಮೋದಿಗೆ ಸರಿಯಾದ ರಕ್ಷಣೆ ನೀಡಿದೆ. ಖಾಲಿ ಚೇರ್‌ಗಳ ಅವಮಾನದಿಂದ ತಪ್ಪಿಸಿಕೊಳ್ಳಲು ದೇಶದ ಒಬ್ಬ ದಲಿತ ಸಿಎಂ ಮೇಲೆ ಆರೋಪ ಮಾಡುತ್ತಿದ್ದಾರೆ.
ಭದ್ರತಾ ವೈಫಲ್ಯಕ್ಕೆ ಎಸ್ಪಿಜಿ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ. ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯ. ಸುಖಾಸುಮ್ಮನೆ ಪಂಜಾಬ್ ಸಿಎಂ ಮೇಲೆ ಆರೋಪ ಮಾಡೋದು ತಪ್ಪು ಎಂದು ಕಿಡಿಕಾರಿದರು.
ಅಸಲಿಗೆ ಸಮಾವೇಶದ ಸ್ಥಳಕ್ಕೆ ಹೆಲಿಕಾಪ್ಟರ್ನಲ್ಲಿ ಬರಬೇಕಿತ್ತು. ಆದರೆ, ಹವಾಮಾನ ವೈಪರೀತ್ಯದಿಂದ ರಸ್ತೆ ಮೂಲಕ ಬಂದಿದ್ದಾರೆ. ಇದಕ್ಕೆ ಯಾರನ್ನೂ ಹೊಣೆ ಮಾಡುವ ಅಗತ್ಯವಿಲ್ಲ ಎಂದರು.
ಲಾಕ್‌ಡೌನ್ ಸಂಬಂಧ ಮಾತನಾಡಿದ ಅವರು, ಲಾಕ್‌ಡೌನ್ ದುರುದ್ದೇಶದಿಂದ ಕೂಡಿದೆ. ಪಾದಯಾತ್ರೆ ಮೊಟಕುಗೊಳಿಸುವ ಏಕೈಕ ಕಾರಣಕ್ಕೆ ಲಾಕ್‌ಡೌನ್ ಮಾಡಿದ್ದಾರೆ. ನೆರೆ ರಾಷ್ಟ್ರ, ನೆರೆ ರಾಜ್ಯಗಳಲ್ಲೂ ಸೋಂಕು ಇದೆ. ಆದರೆ, ಎಲ್ಲಿಯೂ ಕರ್ಫ್ಯೂ,ಲಾಕ್ಡೌನ್ನಂತಹ ನಿರ್ಬಂಧ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ಪಂಜಾಬ್ ಸರ್ಕಾರದ ವಿರುದ್ಧ ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿ ಪ್ರತಿಭಟನೆ
ಮೇಕೆದಾಟು ಪಾದಯಾತ್ರೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜ.9ರಂದು ಕೇವಲ ಮುಖಂಡರು ಮಾತ್ರ ಪಾದಯಾತ್ರೆ ಮಾಡ್ತೀವಿ. ಜ.10ರಿಂದ ಕಾರ್ಯಕರ್ತರು ಭಾಗಿಯಾಗ್ತಾರೆ. ಚಾಮರಾಜನಗರ, ಮೈಸೂರು ಭಾಗದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ.
ಈಗಾಗಲೇ 1ಲಕ್ಷ ಮಾಸ್ಕ್ ರೆಡಿಮಾಡಲಾಗಿದೆ. ಕೋವಿಡ್ ನಿಯಮ ಪಾಲಿಸಿ ಪಾದಯಾತ್ರೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತೇ ಇಲ್ಲ. ಜೈಲಿಗೆ ಹಾಕಿದ್ರೂ ಪಾದಯಾತ್ರೆ ಮಾಡೇ ಮಾಡ್ತೀವಿ ಎಂದು ಸವಾಲ್ ಹಾಕಿದರು.