ಮೈಸೂರು : ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿಸಿದ್ದು ಬಿಜೆಪಿಯವರೇ.. ಈ ಬಗ್ಗೆ ಪೊಲೀಸರು ತನಿಖೆ ಮಾಡಿ ಹೆಸರನ್ನು ಬಹಿರಂಗಪಡಿಸಲಿ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಸವಾಲು ಹಾಕಿದ್ದಾರೆ.
ಇಂದು ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಅವರು ಮಾತನಾಡಿದರು. ಬೆಂಗಳೂರಿನಲ್ಲಿ ಬ್ಲಾಕ್ ದಂಧೆ ಮಾಡುತ್ತಿದ್ದವನು ಸತೀಶ್ ರೆಡ್ಡಿ. ಈ ಪ್ರಕರಣವನ್ನು ಬಯಲು ಮಾಡಿದ್ದು ಬಿಜೆಪಿಯವರೇ.. ಆ ನಂತರ ನಾಟಕ ಮಾಡಿದ್ದರು. ಅದೇ ರೀತಿ ಶಾಸಕರ ಕಾರಿಗೆ ಬೆಂಕಿ ಹಚ್ಚಿಸಿದವರು ಬಿಜೆಪಿಯವರೇ.. ಈಗ ಬೆಂಕಿ ಹಚ್ಚಿದವರು ಯಾರು ಎಂದು ಪೊಲೀಸರು ಹೆಸರನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಸಿ ಟಿ ರವಿ ಕಾಂಗ್ರೆಸ್ ಬಗ್ಗೆ ಮಾಡುತ್ತಿರುವ ಆರೋಪ ಸರಿಯಲ್ಲ. ಆತನೇ ಒಬ್ಬ ಕೊಲೆಗಡುಕ. 2019ರಲ್ಲಿ ಕುಣಿಗಲ್ ಹತ್ತಿರ ಮದ್ಯಸೇವನೆ ಮಾಡಿ ಕಾರು ಚಲಾಯಿಸಿ ಇಬ್ಬರ ಸಾವಿಗೆ ಕಾರಣನಾಗಿದ್ದ. ಇವನು ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುತ್ತಾನೆ. ಇದೇ ರೀತಿ ಮಾತನಾಡಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಮೇಕೆದಾಟು ಯೋಜನೆಯಲ್ಲಿ ಕರ್ನಾಟಕಕ್ಕೆ ಮೋಸವಾಗುತ್ತಿದ್ದರೂ, ಮೊದಲು ನಾವು ಭಾರತೀಯರು. ನಂತರ ಕನ್ನಡಿಗರು ಎಂದು ಸಿ ಟಿ ರವಿ ಹೇಳುತ್ತಿರುವುದಕ್ಕೆ ನಾಚಿಕೆಯಾಗಬೇಕು ಎಂದರು. ಕಾಂಗ್ರೆಸ್ ಬಗ್ಗೆ ಸಚಿವ ಕೆ ಎಸ್ ಈಶ್ವರಪ್ಪ ಅವಾಚ್ಯ ಶಬ್ಧಗಳ ಬಳಕೆ ಕುರಿತು ಅವರು ಪ್ರತಿಕ್ರಿಯಿಸಿದರು. ಬಿಜೆಪಿಯ ಮೇಲಿನ ಕೋಪವನ್ನು ಕಾಂಗ್ರೆಸ್ ಮೇಲೆ ತೋರುತ್ತಿದ್ದಾರೆ. ಅವರಿಗೆ ಯಾವುದೇ ಸಂಸ್ಕೃತಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಯಾವ ರೀತಿ ತನಿಖೆ ಮಾಡುತ್ತಾರೆ ನೋಡೋಣ : ಕೆ ಎಸ್ ಈಶ್ವರಪ್ಪ ಅವರ ಮಗ ಕಾಂತೇಶ್ ಬೆಂಗಳೂರಿನ ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಾಲ್ಕು ದೊಡ್ಡ ಸೈಟ್‌ಗಳನ್ನು ಖರೀದಿ ಮಾಡಿದ್ದಾನೆ. ಅದರ ಬೆಲೆ ಕೋಟ್ಯಂತರ ರೂ. ಒಬ್ಬನಿಗೆ ನಾಲ್ಕು ಸೈಟ್ ಹೇಗೆ ನೀಡುತ್ತಾರೆ?. ಐಟಿ, ಇಡಿ ಯಾಕೆ ತನಿಖೆ ಮಾಡುವುದಿಲ್ಲ.
ಈ ಬಗ್ಗೆ ನನ್ನ ಬಳಿ ಸಂಪೂರ್ಣ ದಾಖಲಾತಿಗಳು ಇವೆ. ಸಚಿವ ಈಶ್ವರಪ್ಪ ಸರ್ಕಾರದ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಆತನ ಮಗ ಭ್ರಷ್ಟಾಚಾರ ಮಾಡಿದ್ದಾರೆ. ಈ ಬಗ್ಗೆ ಇಡಿ ಮತ್ತು ಐಟಿಗೆ ದಾಖಲಾತಿಗಳನ್ನು ಕಳುಹಿಸುತ್ತೇವೆ. ಯಾವ ರೀತಿ ತನಿಖೆ ಮಾಡುತ್ತಾರೆ ಎಂಬುದನ್ನು ನೋಡೋಣ ಎಂದು ಸವಾಲು ಹಾಕಿದರು.
ಸಂಸದ ಪ್ರತಾಪ್ ಸಿಂಹ ನನ್ನ ವಿರುದ್ಧ ಮಾನನಷ್ಟ ಕೇಸ್ ಹಾಕಿ ಪೊಲೀಸರ ಮೂಲಕ ಧಮ್ಕಿ ಹಾಕಿಸುತ್ತಿದ್ದಾನೆ. ಈ ಮೂಲಕ ನನ್ನ ಧ್ವನಿಯನ್ನು ಅಡಗಿಸಲು ಮುಂದಾಗಿದ್ದಾನೆ. ಇಂತಹ ಮಾನನಷ್ಟ, ಧಮ್ಕಿಗಳಿಗೆ ನಾನು ಹೆದರುವುದಿಲ್ಲ. ಬದಲಾಗಿ ಇನ್ನೂ ಹೋರಾಟವನ್ನು ಹೆಚ್ಚು ಮಾಡುತ್ತೇನೆ. 7 ವರ್ಷ ಸಂಸದನಾಗಿ ನೀವು ಮೈಸೂರಿಗೆ ಕೊಟ್ಟ ಕೊಡುಗೆ ಏನು? ಎಂಬುವುದನ್ನು ಜನರಿಗೆ ತಿಳಿಸಿ ಎಂದು ವಾಗ್ದಾಳಿ ನಡೆಸಿದರು.
ಓದಿ: 3 ಖಾಲಿ ಬಾಟಲಿ ಮೇಲೆ 30 ಸೆಕೆಂಡ್ಸ್ನಲ್ಲಿ 27 ಬಾರಿ ಪುಷ್‌ಅಪ್ ; ಗಿನ್ನೆಸ್ ದಾಖಲೆ ಬರೆದ ಮೈಸೂರು ವಿದ್ಯಾರ್ಥಿ