ಮೈಸೂರು : ಕೊರೊನಾ ವೈರಸ್ ವಿಚಾರದಲ್ಲೂ ರಾಜ್ಯ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಸರಾ ಸಂದರ್ಭದಲ್ಲಿ ಕೊರೊನಾ ಹರಡದಂತೆ ಜಿಲ್ಲಾಧಿಕಾರಿ ಮುನ್ನೆಚ್ಚರಿಕೆಯಾಗಿ ಪ್ರವಾಸಿ ತಾಣಗಳಿಗೆ ಹೇರಿದ್ದ ನಿರ್ಬಂಧವನ್ನು ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ತೆರವುಗೊಳಿಸಿದ್ದಾರೆ. ಇದರಿಂದ ಅಪಾಯ ಹೆಚ್ಚಾಗಲಿದೆ ಎಂದು ಹೇಳಿದರು.
ನಿರ್ಬಂಧ ತೆರವು ಪರಿಣಾಮ ಕಳೆದ ನಾಲ್ಕು ದಿನಗಳಿಂದ ಸುಮಾರು 2 ಲಕ್ಷ ಜನರು ಬಂದು ಹೋಗಿದ್ದಾರೆ. ಅವರಿಂದ ಮೈಸೂರಿಗರಿಗೆ ಕೊರೊನಾ ಹರಡುವ ಜೊತೆಗೆ ಮೈಸೂರಿನಿಂದ ಕೊರೊನಾ ಸೋಂಕು ಕೊಂಡೊಯ್ದಿದ್ದಾರೆ. ಇದರಿಂದ ಮೈಸೂರಿನಲ್ಲಿ ಕೊರೊನಾ ಸೋಂಕು ಹೆಚ್ಚಾದ್ರೆ ಅದಕ್ಕೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಹೊಣೆಯಾಗಲಿದೆ ಎಂದು ದೂರಿದರು.
ರಾಜ್ಯದಲ್ಲಿ 600ಕ್ಕೂ ಹೆಚ್ಚು ಕೊರೊನಾ ವಾರಿಯರ್ಸ್ಗಳು ಸಾವನ್ನಪ್ಪಿದ್ದಾರೆ. ಆದರೆ, 13 ಜನರಿಗೆ ಮಾತ್ರ ಸರ್ಕಾರ ಪರಿಹಾರ ನೀಡಿದೆ. ಯಾವುದೋ ಇನ್ಸೂರೆನ್ಸ್ ಕಂಪನಿಗೆ ಇದರ ಜವಾಬ್ದಾರಿ ವಹಿಸಲಾಗಿದೆ. ಅವರು ಕೇಳುವ ದಾಖಲೆಗಳನ್ನು ಮೃತ ಪಟ್ಟಿರುವ ಕೊರೊನಾ ವಾರಿಯರ್ಸ್ ನೀಡಲಾಗದೇ ಪರಿಹಾರವೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದರು.
ಕೇವಲ ಪ್ರಚಾರಕ್ಕಾಗಿ ಪರಿಹಾರ ಘೋಷಣೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಬೇಜವಾಬ್ದಾರಿತನಕ್ಕೆ ಇದು ಸಾಕ್ಷಿಯಾಗಿದೆ. ರಾಜ್ಯದಲ್ಲಿ ಮೇಲಿಂದ ಮೇಲೆ ಉಂಟಾಗುತ್ತಿರುವ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಕಳೆದ ವರ್ಷದಿಂದ ಇತ್ತೀಚಿನವರೆಗೆ ಸಂಭವಿಸಿದ ಪ್ರವಾಹ ಪರಿಸ್ಥಿತಿಯಿಂದ ಅಂದಾಜು 48 ಸಾವಿರ ಕೋಟಿ ನಷ್ಟವಾಗಿದೆ. ಆದರೆ, ಕೇಂದ್ರ ಸರ್ಕಾರ ಕೇವಲ 2 ಸಾವಿರ ಕೋಟಿ ನೆರವು ನೀಡಿದೆಯಷ್ಟೇ. ನೆರೆಯ ಆಂಧ್ರಪ್ರದೇಶಕ್ಕೆ ಹೆಚ್ಚಿನ ನೆರವು ನೀಡಲಾಗಿದೆ. ರಾಜ್ಯಕ್ಕೆ ನೆರವು ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.