ಮೈಸೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರನ್ನ ಲೂಟಿ ರವಿ ಅನ್ನಬಾರದು, ಇನ್ಮುಂದೆ ಹುಚ್ಚು ನಾಯಿ ಅಂತ ಕರೆಯಬೇಕು ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಅವರು, ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಸಿ ಟಿ ರವಿ ಹಗುರವಾಗಿ ಮಾತನಾಡಿದ್ದಾರೆ. ಹಾಗಾದ್ರೆ ನೀವು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವವರನ್ನ ಚುನಾವಣೆ ಮೂಲಕ ಆಯ್ಕೆ ಮಾಡಿದ್ದೀರಾ? ಎಂದು ಪ್ರಶ್ನಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಚುನಾವಣೆ ಮೂಲಕ ಆಯ್ಕೆಯಾದವರಾ?, ಹಿಂದೆ ಇದ್ದ ಅಧ್ಯಕ್ಷರು ಚುನಾವಣೆ ಮೂಲಕ ಆಯ್ಕೆಯಾಗಿದ್ದಾರಾ?. ಕಾಂಗ್ರೆಸ್ ಪಕ್ಷ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡುತ್ತದೆ. ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ಮುನ್ನ ಸಿ ಟಿ ರವಿ ಯೋಚಿಸಬೇಕು. ಬಾಯಿಗೆ ಬಂದಂತೆ ಮಾತನಾಡಬಾರದು ಎಂದು ಹರಿಹಾಯ್ದರು.
ಇದನ್ನೂ ಓದಿ: ಮೀಸಲಾತಿ ವಿಚಾರದಲ್ಲಿ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ: ಕೆಪಿಸಿಸಿ ವಕ್ತಾರ ಲಕ್ಷಣ್
ಸಿ ಟಿ ರವಿ ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆ ಅಕ್ರಮವಾಗಿ ಆಸ್ತಿ ಮಾಡಿದ್ದಾರೆ. ಅದರ ಬಗ್ಗೆ ಮುಂದಿನ ದಿನಗಳಲ್ಲಿ ಸಿಡಿ ಸಮೇತ ವಿಡಿಯೋ ಬಿಡುಗಡೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬ್ಯಾಂಕ್ಗಳಿಂದ ಹಣ ಲೂಟಿ: ಕೇಂದ್ರ ಸರ್ಕಾರ ಬ್ಯಾಂಕ್ಗಳಲ್ಲಿರುವ ಗ್ರಾಹಕರ ಖಾತೆಯಿಂದ ಹಣ ಕೂಡ ಲೂಟಿ ಮಾಡುತ್ತಿದೆ. ಆದರೆ, ಇದರ ಬಗ್ಗೆ ಜನರಿಗೆ ತಿಳಿಯುತ್ತಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ: ಮುನಿರತ್ನರನ್ನು ಮಂತ್ರಿ ಸ್ಥಾನದಿಂದ ತೆಗೆದುಹಾಕಿ: ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್
ದಸರಾ ಲೆಕ್ಕ ಕೊಡಿ: ದಸರಾ ಮುಗಿದು 23 ದಿವಸ ಆಗಿದೆ. ಆದರೆ ಇನ್ನೂ ಲೆಕ್ಕ ಕೊಟ್ಟಿಲ್ಲ. 35 ಕೋಟಿ ರೂ. ಹೇಗೆ ಖರ್ಚು ಆಯಿತು? ಎಂಬುದರ ಬಗ್ಗೆ ಲೆಕ್ಕ ಕೊಡಿ ಎಂದು ಇದೇ ವೇಳೆ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನ ಲಕ್ಷ್ಮಣ್ ಆಗ್ರಹಿಸಿದರು. ಜೊತೆಗೆ ಸಿಎಂ ಬಸವರಾಜ ಬೊಮ್ಮಾಯಿ ಕೈಯಲ್ಲಿ ಎಂಟು ಸಚಿವ ಸ್ಥಾನಗಳಿವೆ. ಅದನ್ನು ನಿಭಾಯಿಸಲು ಅವರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಮ್: ಲಕ್ಷ್ಮಣ್ ವಾಗ್ದಾಳಿ