ಮೈಸೂರು: 'ಟಿಪ್ಪು ನಿಜಕನಸುಗಳು' ನಾಟಕ ಪ್ರದರ್ಶನದ ಬಳಿಕ, ನಿಜಕನಸುಗಳು ಟೈಟಲ್ಗಳ ಮುಂದೆ ಅನೇಕ ಹೆಸರುಗಳು ಸೇರ್ಪಡೆಯಾಗುತ್ತಿದೆ. ಹೌದು, ಈ ಸಂಬಂಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಅವರು ಕಾಂಗ್ರೆಸ್ ಕಚೇರಿಯಲ್ಲಿ 'ಬಿಜೆಪಿಯ ನಿಜಕನಸುಗಳು' ಎಂಬ ಭಿತ್ತಿಪತ್ರ ಬಿಡುಗಡೆ ಮಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ರಾಜ್ಯ ಸರ್ಕಾರ ಶೇ. 40 ಕಮಿಷನ್ ಹಣಕ್ಕಾಗಿ, ರಾಜ್ಯವನ್ನು ಹಾಳು ಮಾಡುತ್ತಿದೆ. ಮೀಸಲಾತಿ ಹೆಚ್ಚಳ ಹೆಸರಿನಲ್ಲಿ ಸಮುದಾಯಗಳು ಕಿತ್ತಾಡುವಂತೆ ಮಾಡುತ್ತಿದ್ದಾರೆ. ಪಂಚಮಸಾಲಿ ಲಿಂಗಾಯತ, ಒಗ್ಗಲಿಗ ಎಸ್ಸಿ ಎಸ್ಟಿ ಇರಬಹುದು. ಎಲ್ಲರ ವಿಷಯದಲ್ಲೂ ಮೂಗಿಗೆ ತುಪ್ಪ ಸವರುವಂತಹ ಕೆಲಸ ಮಾಡುತ್ತಿದ್ದಾರೆ. ಎಸ್.ಸಿ, ಎಸ್ಟಿಗಳ ಮೇಲಿನ ದೌರ್ಜನ್ಯ ಶೇ. 26ಕ್ಕೆ ಏರಿಕೆಯಾಗಿದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಬಿಜೆಪಿ ವಿರುದ್ಧ ಮತ ಹಾಕುವವರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವುದು, ಇವೇ ಬಿಜೆಪಿ ನಿಜಕನಸುಗಳು ಎಂದು ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಪಿಎಸ್ಐ, ಕೆಪಿಟಿಸಿಎಲ್ ಸೇರಿ ಸಹಾಯಕ ಇಂಜಿನಿಯರಿಂಗ್ ಹೀಗೆ ಪ್ರತಿ ಸರ್ಕಾರಿ ಹುದ್ದೆಗೆ 40 ಲಕ್ಷ ರೂ. ದಿಂದ 1 ಕೋಟಿ ವರೆಗೆ ಹರಾಜು ಹಾಕಲಾಗುತ್ತಿದೆ. ರೈತರು ಆತ್ಮಹತ್ಯೆ ಪ್ರಕರಣದಲ್ಲಿ ರಾಜ್ಯ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಬಿಜೆಪಿಯಲ್ಲಿ ಪಿಂಪ್ಗಳು ಹೆಚ್ಚಾಗುತ್ತಿದ್ದಾರೆ. ಇದನ್ನು ನಾವು ಹೇಳುತ್ತಿಲ್ಲ. ಬಿಜೆಪಿಯಲ್ಲಿರುವ ಸಚಿವರು, ಮಂತ್ರಿಗಳೇ ಹೇಳಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಹಾಗೂ ಅವರ ಕುಟುಂಬದವರನ್ನು ಸಂಪೂರ್ಣವಾಗಿ ಬದಿಗೆ ತಳ್ಳಿ ಹೊಸದಾಗಿ ಬಿಜೆಪಿ ಪಕ್ಷವನ್ನು ಕಟ್ಟುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ. ಹೀಗೆ ಹಲವು ವಿಷಯಗಳ ಬಗ್ಗೆ ಬಿಜೆಪಿ ವಿರುದ್ಧ ಟೀಕಿಸಿದರು.
ಜೆಡಿಎಸ್ ಬಿಜೆಪಿಯ ಬಿ ಟೀಮ್: ಕೇಂದ್ರ ಗೃಹಮಂತ್ರಿ ಅಮಿತ್ ಶಾ, ಮಂಡ್ಯ ಜಿಲ್ಲೆಗೆ ಬಂದು ಜೆಡಿಎಸ್ ಜೊತೆ ಹೊಂದಾಣಿಕೆ ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ. ಇದೆಲ್ಲ ಬಿಜೆಪಿಯ ಕುತಂತ್ರ, ಕಾಂಗ್ರೆಸ್ಗೆ ಮುಸ್ಲಿಂ ಸಮುದಾಯದ ಓಟು ಹೋಗಬಾರದು ಎಂಬ ಉದ್ದೇಶದಿಂದ ಜೆಡಿಎಸ್ ಪಕ್ಷವನ್ನು ಟೀಕಿಸುತ್ತಿದ್ದಾರೆ. ಜೆಡಿಎಸ್ಗೆ ಬೈದರೆ ಮುಸ್ಲಿಂ ಮತಗಳು ಜೆಡಿಎಸ್ಗೆ ಹೋಗುತ್ತದೆ. ಆಗ ಅದು ಬಿಜೆಪಿಗೆ ಸಹಾಯ ಮಾಡಿದಂತೆ ಆಗುತ್ತದೆ ಎಂದು ಆರೋಪಿಸಿದರು. ಮುಸ್ಲಿಂ ಸಮುದಾಯದವರು ಜೆಡಿಎಸ್ಗೆ ಮತ ನೀಡಿದರೆ, ಬಿಜೆಪಿಗೆ ಮತ ಕೊಟ್ಟಂತಾಗುತ್ತದೆ. ಅಪ್ಪಿತಪ್ಪಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಮುಸ್ಲಿಂ ಸಮುದಾಯದಕ್ಕೆ ಅಪಾಯ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಚುನಾವಣೆ ಬಂದಾಗ ಮೋದಿಯಿಂದ ಪ್ಯಾಕೇಜ್ಗಳ ಘೋಷಣೆ: ಯಾವ ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗುತ್ತದೆ. ಆ ರಾಜ್ಯಗಳಿಗೆ ಹೋಗುವ ನರೇಂದ್ರ ಮೋದಿ, ವಿಶೇಷ ಪ್ಯಾಕೇಜ್ಗಳನ್ನು ಘೋಷಣೆ ಮಾಡುತ್ತಾರೆ. ಕೇರಳದಲ್ಲಿ 1.20 ಲಕ್ಷ ಕೋಟಿ ಮೌಲ್ಯದ ಯೋಜನೆ, ತೆಲಂಗಾಣದಲ್ಲಿ 1.35 ಲಕ್ಷ ಕೋಟಿ ಮೌಲ್ಯದ ಯೋಜನೆ ಘೋಷಣೆ ಮಾಡಿದ್ರು. ಈಗ ಕರ್ನಾಟಕದಲ್ಲಿಯೂ ಕಳೆದ 2018ರಿಂದಲೂ 1.75 ಲಕ್ಷ ಕೋಟಿ ಮೌಲ್ಯದ ಯೋಜೆನಗಳನ್ನು ಘೋಷಣೆ ಮಾಡಿದ್ದಾರೆ. ಇಲ್ಲೂ ಒಂದೂ ನಯಾಪೈಸೆಯನ್ನು ಕೊಟ್ಟಿಲ್ಲ. ಆ ಯೋಜನೆಗಳೆಲ್ಲ ಏನಾದವು? ಅನುದಾನ ಬಿಡುಗಡೆ ಮಾಡಿದ್ರಾ? ಅದರ ಲೆಕ್ಕ ಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು ಈಗ ಮತ್ತೆ 2023ರ ಚುನಾವಣೆಗೂ ಮೋದಿ ಅವರ ಯೋಜನೆ ಘೋಷಣೆ ಮಾಡುವ ಪರ್ವ ಶುರುವಾಗಿದೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ರಂಗಾಯಣದ ಮೂಲಕ ಶಾಂತಿ ಕದಡಲು ಸರ್ಕಾರದ ಯತ್ನ: ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪ