ಮೈಸೂರು: ಕಲ್ಲಡ್ಕ ಪ್ರಭಾಕರ್ ಯಾರು, ಏನು ಎಂಬುದು ಗೊತ್ತಿಲ್ಲ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಸಮಾಧಾನ ಹೊರಹಾಕಿದರು.
ಮುಂದೊಂದು ದಿನ ಕೇಸರಿ ಬಾವುಟ ರಾಷ್ಟ್ರಧ್ವಜ ಆಗಬಹುದು ಎಂಬ ಹಿಂದೂ ಪರ ಸಂಘಟನೆ ಮುಖಂಡ ಕಲ್ಲಡ್ಕ ಪ್ರಭಾಕರ್ ಹೇಳಿಕೆ ವಿಚಾರವಾಗಿ ಮೈಸೂರಿನ ಜಲದರ್ಶಿನಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಲ್ಲಡ್ಕ ಪ್ರಭಾಕರ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಈ ಹಿಂದೆ ಸಚಿವ (ಕೆ.ಎಸ್.ಈಶ್ವರಪ್ಪ)ರೊಬ್ಬರ ಹೇಳಿಕೆಗೆ ಹೋರಾಟ ಮಾಡಿದ್ದೆವು. ಆ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಂದ ಪ್ರತಿಕ್ರಿಯೆ ಸಿಕ್ಕಿದೆ. ಈ ರೀತಿ ಮಾತನಾಡುವವರು ರಾಷ್ಟ್ರ ದ್ರೋಹಿಗಳು, ಜನರು ದಡ್ಡರಲ್ಲ. ಈ ರೀತಿಯ ಮಾತುಗಳಿಗೆ ಮರಳಾಗುವುದಿಲ್ಲ ಎಂದರು.
ರಾಜ್ಯದ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರವಾಗಿ ಮಾತನಾಡಿ, ಇಂದು ಭಗವದ್ಗೀತೆ ವಿಚಾರದಲ್ಲಿ ಸಮಾಜವನ್ನ ಇಬ್ಭಾಗ ಮಾಡಲು ಬಿಜೆಪಿ ಮುಂದಾಗಿದೆ. ಆದರೆ ಜನ ದಡ್ಡರಲ್ಲ, ಎಲ್ಲವನ್ನ ಗಮನಿಸುತ್ತಾರೆ. ಹಿಂದೆ ರಾಜೀವ್ ಗಾಂಧಿ ಇಡೀ ದೇಶಕ್ಕೆ ರಾಮಾಯಣ, ಮಹಾಭಾರತ ಪ್ರಸಾರ ಮಾಡಿದ್ದಾರೆ. ದೂರದರ್ಶನದ ಮೂಲಕ ದೇಶದ ಜನರಿಗೆ ತಲುಪಿಸಿದ್ದಾರೆ. ರಾಜೀವ್ ಗಾಂಧಿ ಇಡೀ ದೇಶಕ್ಕೆ ಹಿರಿಯರಿಂದ ಕಿರಿಯವರೆಗೂ ಭಗವದ್ಗೀತೆ ಪರಿಚಯಿಸಿ ಫೌಂಡೇಶನ್ ಹಾಕಿಕೊಟ್ಟಿದ್ದಾರೆ ಎಂದು ಹೇಳಿದರು.
ನಾವು ಸಹ ಹಿಂದೂಗಳೇ. ಭಗವದ್ಗೀತೆಯ ಯದಾ ಯದಾ ಹಿ ಧರ್ಮಸ್ಯ ಶ್ಲೋಕದ ಮೂಲಕ ಬಿಜೆಪಿಗೆ ತಿರುಗೇಟು ನೀಡಿದರು. ಡಿ.ಕೆ.ಶಿವಕುಮಾರ್ ದಿ ಕಾಶ್ಮೀರ್ ಫೈಲ್ ಕನ್ನಡ ಅವತರಣಿಕೆ ವಿಚಾರವಾಗಿ ಮಾತನಾಡಲು ನಿರಾಕರಿಸಿದರು.
ಇದನ್ನೂ ಓದಿ: ಚುನಾವಣೆಗೆ ಒಂದು ವರ್ಷ ಬಾಕಿ ಇದೆ, ಸಿಎಂ ಹೊನ್ನಾಳಿಗೆ ಬಂದ್ರೆ ನನ್ನ ಕ್ಷೇತ್ರ ಬಿಟ್ಟುಕೊಡಲು ಸಿದ್ದ : ರೇಣುಕಾಚಾರ್ಯ
ಬಿಜೆಪಿ ಅವರ ಸಿದ್ಧಾಂತದ ಮೇಲೆ ಹೋಗ್ತಿದೆ. ನಾವು ನಿರುದ್ಯೋಗ, ಬೆಲೆ ಏರಿಕೆ ಸೇರಿದಂತೆ ಜನರ ಸಮಸ್ಯೆ ಮುಂದಿಟ್ಟುಕೊಂಡು ಹೋಗುತ್ತೀವಿ. ಇಂದು ಕಬ್ಬಿಣದ ಬೆಲೆ ಟನ್‌ಗೆ 1 ಲಕ್ಷ , ಸಿಮೆಂಟ್ ದರ 450 ರೂ. ಆಗಿದೆ. ಗುತ್ತಿಗೆದಾರರು, ಬಿಲ್ಡರ್ಸ್‌ಗೆ ಬಿಲ್ ಬರುತ್ತೆ. ಆದರೆ, ಸಾಮಾನ್ಯ ಜನ ಮನೆ ಕಟ್ಟೋದು ಹೇಗೆ ಎಂದು ಪ್ರಶ್ನಿಸಿದರು.
ಕೇಂದ್ರ ಸಚಿವೆ ನಮ್ಮ ಶೋಭಕ್ಕ ನೋಡಿದ್ರೆ ಏನೇನೋ ಹೇಳಿಕೆ ಕೊಟ್ಟಿದ್ದಾರೆ. ಮೊದಲು ರೈತರಿಗೆ ಬೆಂಬಲ ಬೆಲೆ ಕೊಡಕ್ಕ. ರಾಗಿ ಖರೀದಿ ಮಾಡಿಸು, ರೈತರನ್ನ ಮೊದಲು ಉಳಿಸಕ್ಕ ಎಂದು ಹೇಳುವ ಮೂಲಕ ಶೋಭಾ ಕರಂದ್ಲಾಜೆ ವಿರುದ್ಧ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.