ಮೈಸೂರು : ನಾನೇನು ಸನ್ಯಾಸಿನಾ, ಕಾವಿ ಬಟ್ಟೆ ಹಾಕಿಲ್ಲ, ಖಾದಿ ಬಟ್ಟೆ ಹಾಕಿದ್ದೇನೆ. ಎಸ್.ಎಂ ಕೃಷ್ಣ ಅವರ ನಂತರ ಸಮುದಾಯದಲ್ಲಿ ನಾನು ಒಂದು ಹಂತಕ್ಕೆ ಬಂದಿದ್ದೇನೆ. ನನ್ನ ಜೊತೆ ಕೈಜೋಡಿಸಿ ಎಂದು ನಮ್ಮ ಸಮುದಾಯಕ್ಕೆ ಮನವಿ ಮಾಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಬಣ, ಡಿ.ಕೆ ಶಿವಕುಮಾರ್ ಬಣ ಎಂಬುದು ಇಲ್ಲ. ಇರುವುದು ಕಾಂಗ್ರೆಸ್ ಬಣ ಮಾತ್ರ. ಮತ್ಯಾವುದೇ ಬಣ ಇಲ್ಲ. ಎಸ್.ಎಂ ಕೃಷ್ಣ ನಂತರ ಒಕ್ಕಲಿಗ ಸಮುದಾಯದಿಂದ ಒಂದು ಹಂತಕ್ಕೆ ಬಂದಿದ್ದೇನೆ. ಹಾಗಾಗಿ ಈ ಬಾರಿ ನನ್ನ ಕೈ ಬಲಪಡಿಸಿ ಎಂದು ಬೆಂಗಳೂರಿನ ಕಾರ್ಯಕ್ರಮದಲ್ಲಿ ಹೇಳಿದ್ದೇನೆ. ಜೊತೆಗೆ ಎಲ್ಲಾ ಸಮುದಾಯದ ಬೆಂಬಲ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.
ನೀವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನೇನು ಸನ್ಯಾಸಿಯೇ, ನಾನು ಕಾವಿ ಬಟ್ಟೆ ಧರಿಸಿದ್ದೇನಾ, ನಾನು ಖಾದಿ ಬಟ್ಟೆ ತೊಟ್ಟಿದ್ದೇನೆ. ಮೊದಲು ಕಾಂಗ್ರೆಸ್ ಸರ್ಕಾರ ಬರಬೇಕು. ಮುಖ್ಯಮಂತ್ರಿ ಯಾರು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದರು.
ಸಿದ್ದರಾಮೋತ್ಸವದಲ್ಲಿ ಭಾಗಿಯಾಗುತ್ತೇನೆ : ನಾನು ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಸಿದ್ದರಾಮೋತ್ಸವದಲ್ಲಿ ಭಾಗವಹಿಸುತ್ತೇವೆ. ಸಿದ್ದರಾಮಯ್ಯ ಅವರ 75 ನೇ ವರ್ಷದ ಕಾರ್ಯಕ್ರಮವನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಇದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು. ನಾನು ಸರಳವಾಗಿ ಆಚರಿಸಿಕೊಂಡೆ. ಅದು ನನ್ನ ವಿಚಾರ, ಕೆಲವರು ಅದ್ಧೂರಿಯಾಗಿ ಆಚರಿಸುತ್ತಾರೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತರಿಗೆ ಮುಖ್ಯಮಂತ್ರಿ ಅವಕಾಶ ಇದೆಯಾ ಎಂಬ ಪ್ರಶ್ನೆಗೆ ಯಾಕಾಗಬಾರದು ಎಂದು ಡಿಕೆಶಿ ಉತ್ತರಿಸಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಪ್ರತಿಪಕ್ಷವಾಗಿ ವಿಫಲವಾಗಿಲ್ಲ, ನಿರಂತರವಾಗಿ ಹೋರಾಟ ನಡೆಸುತ್ತಿದೆ. ಅದರ ಫಲವಾಗಿಯೇ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದರು. ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿದ್ದು, ರಾಜ್ಯದಲ್ಲಿ ದಪ್ಪ ಚರ್ಮದ ಭ್ರಷ್ಟ ಸರ್ಕಾರವಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ಜನಸಾಮಾನ್ಯರಿಗೆ ತೊಂದರೆ : ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನ ಸಾಮಾನ್ಯರಿಗೆ ತೊಂದರೆ ಆಗಿದ್ದು, ಧಾರ್ಮಿಕ ವಿಚಾರದಲ್ಲಿ ಅಶಾಂತಿ ಉಂಟುಮಾಡುತ್ತಿದೆ. ಇದರ ಜೊತೆಗೆ ಭ್ರಷ್ಟಾಚಾರ ಹೆಚ್ಚಾಗಿದ್ದು, ಹೋಟೆಲ್ ಗಳಲ್ಲಿ ತಿಂಡಿ ಪದಾರ್ಥಗಳಿಗೆ ಬೆಲೆ ನಿಗದಿಪಡಿಸುವ ರೀತಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಿಷ್ಟು, ಮಂತ್ರಿ ಸ್ಥಾನಕ್ಕಿಷ್ಟು ಎಂದು ಬೋರ್ಡ್ ಹಾಕಿದ್ದಾರೆ. ಸರ್ಕಾರಿ ಕಾಮಗಾರಿಗಳಿಗೆ ಶೇ 40% ಕಮಿಷನ್ ಪಡೆಯಲಾಗಿದೆ ಎಂಬ ಆರೋಪ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಅಕ್ರಮ ನೇಮಕಾತಿ ಹಗರಣಗಳನ್ನು ಮುಚ್ಚಿ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿಯವರೇ ಆದ ಹೆಚ್. ವಿಶ್ವನಾಥ್, ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದರು. ಅವರಿಗೆ ನೋಟಿಸ್ ಕೊಟ್ಟಿಲ್ಲ, ಬದಲಿಗೆ ಪ್ರಿಯಾಂಕ್ ಖರ್ಗೆಗೆ ನೋಟಿಸ್ ಕೊಟ್ಟು, ಬೆದರಿಸಲು ಪ್ರಯತ್ನಿಸಿದರು ಎಂದು ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ : ಮುಂಬರುವ ವಿಧಾನಸಭಾ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ. ಒಬ್ಬ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇರಿಸಿದೆ. ಅದರಂತೆ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರವಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಅವಧಿಯಲ್ಲಿ ನಡೆದ ಎಲ್ಲ ಹಗರಣಗಳನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಹೇಳಿದರು. ಮುಂದಿನ ಬಾರಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ನಾನು ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಗೊತ್ತಾಗಿದೆ ಎಂದು ಇದೇ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಹೇಳಿದರು.
ಓದಿ : ವಿದ್ಯಾರ್ಥಿನಿ ಸಾವು ಪ್ರಕರಣ: ತಾವು ಬಯಸಿದ ವೈದ್ಯರಿಂದ ಮರು ಮರಣೋತ್ತರ ಪರೀಕ್ಷೆ ಕೋರಿದ ಅರ್ಜಿ ವಜಾ