ಮೈಸೂರು: ಭಾರತೀಯ ಕ್ರಿಕೆಟ್ ತಂಡದ ಬ್ಯಾಟರ್ ಕೆ.ಎಲ್.ರಾಹುಲ್ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬುಧವಾರ ಭೇಟಿ ನೀಡಿದ್ದು, ನಾಡದೇವತೆಯ ದರ್ಶನ ಪಡೆದಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಬುಧವಾರ ಬೆಳಗ್ಗೆ ಆಗಮಿಸಿದ ಅವರು, ಮಾಸ್ಕ್ ಧರಿಸಿಕೊಂಡಿದ್ದರು. ಗಣ್ಯರು ಪೂಜೆ ಸಲ್ಲಿಸುವ ಸ್ಥಳದಲ್ಲಿ ನಿಂತು ಗರ್ಭಗುಡಿಯ ಪಕ್ಕದಲ್ಲಿರುವ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು.
'ನಮ್ಮ ಕೋರಿಕೆಯ ಮೇರೆಗೆ ಅವರ ಜೊತೆ ನಿಂತು ಒಂದು ಫೋಟೊ ತೆಗೆದುಕೊಂಡೆವು. ಈ ಫೋಟೋವನ್ನು ಎಲ್ಲೂ ಪ್ರಚಾರಕ್ಕೆ ಕೊಡಬೇಡಿ ಎಂದು ಅವರು ತಿಳಿಸಿದ್ದಾರೆ' ಎಂದು ದೇವಾಲಯದ ಮಣೆಗರ ನಾಗರಾಜ್ ಈಟಿವಿ ಭಾರತ್‌ಗೆ ತಿಳಿಸಿದರು. ಸದ್ಯ ಬಿಡುವಿನಲ್ಲಿರುವ ರಾಹುಲ್, ಶ್ರೀಲಂಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗೆ ತಂಡ ಸೇರ್ಪಡೆಗೊಂಡಿದ್ದು, ಜ.10 ರಿಂದ ಸರಣಿ ಆರಂಭಗೊಳ್ಳಲಿದೆ. ಜ.10, 12 ಮತ್ತು 15 ರಂದು ಏಕದಿನ ಪಂದ್ಯಗಳು ನಡೆಯಲಿದೆ.
ಇತ್ತೀಚೆಗೆ ಮುಗಿದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ 2-0 ಅಂತರದಲ್ಲಿ ಗೆದ್ದರೂ ತಂಡದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ವೈಫಲ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಹೀಗಾಗಿ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ತವರು ಟೆಸ್ಟ್ ಸರಣಿ ಮತ್ತು ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲಿ ಆಯ್ಕೆಗಾರರು ರಾಹುಲ್ ಅವರನ್ನು ಕೈಬಿಡಬಹುದೆಂಬ ಮಾತುಗಳು ಕೇಳಿಬಂದಿದ್ದವು. ಆದರೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿರುವ ಕೆ.ಎಲ್.ರಾಹುಲ್, ಟೀಕಿಸುವ ಜನರ ಬಾಯಿ ಮುಚ್ಚಿಸುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.
ಕೆ.ಎಲ್.ರಾಹುಲ್ ಮದುವೆ ಯಾವಾಗ?: ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಮತ್ತು ಭಾರತೀಯ ಕ್ರಿಕೆಟಿಗ ಕೆ.ಎಲ್.ರಾಹುಲ್ ನಡುವೆ ಪ್ರೀತಿ-ಪ್ರೇಮ ಇದೆ ಎಂದು ಹಲವು ದಿನಗಳಿಂದ ಊಹಾಪೋಹಗಳೆದ್ದಿದವು. ಇದಕ್ಕೆ ಸರಿಯಾಗಿ ಅವರಿಬ್ಬರ ಜೊತೆಗಿನ ಫೋಟೊಗಳು ಕೂಡ ವೈರಲ್ ಆಗಿದ್ದವು. ಅಂತಿಮವಾಗಿ ಸುನೀಲ್ ಶೆಟ್ಟಿ ಮಗಳ ಮದುವೆ ವಿಚಾರ ಕುರಿತು ಸ್ವತಃ ಹೇಳಿಕೆ ನೀಡಿ, 'ಶೀಘ್ರದಲ್ಲೇ ಮಗಳ ಮದುವೆಯನ್ನು ಕೆ.ಎಲ್.ರಾಹುಲ್ ಜೊತೆ ಮಾಡಲಿದ್ದೇನೆ' ಎಂದು ಶೆಟ್ಟಿ ತಿಳಿಸಿದ್ದರು. ಅದರಂತೆ, ಇದೇ ತಿಂಗಳ 21 ರಿಂದ 23ರವರೆಗೆ ಮದುವೆ ಕಾರ್ಯಕ್ರಮ ನಡೆಯಲಿದೆಯಂತೆ.
ಇದನ್ನೂ ಓದಿ: ಕೆ ಎಲ್ ರಾಹುಲ್ ಕಳಪೆ ಪ್ರದರ್ಶನ: ಶ್ರೀಲಂಕಾ ವಿರುದ್ಧದ ಸರಣಿಯಿಂದ ಕೈ ಬಿಡುವ ಸಾಧ್ಯತೆ