ಮೈಸೂರು: ಕೋಪ ಮತ್ತು ವೈಯಕ್ತಿಕ ದ್ವೇಷ ಸ್ನೇಹಿತರ ಬದುಕನ್ನೇ ಬರ್ಬಾದ್ ಮಾಡಿದೆ. ಅಲ್ಲದೇ, ಇಬ್ಬರು ಸ್ಮಶಾನ ಸೇರಿದರೆ, ಮತ್ತಿಬ್ಬರು ಜೈಲು ಸೇರಿ ಅಜ್ಞಾತವಾಸ ಅನುಭವಿಸುವಂತಾಗಿದೆ.
ಹೌದು, ಗೌರಿಶಂಕರ ನಗರದ ಕೊಲೆಯಾದ ಯುವಕರ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದರೆ, ದ್ವೇಷ ಹಾಗೂ ಕೋಪದಿಂದ ಕೊಲೆ ಮಾಡಿ ತಲೆಮರೆಸಿಕೊಂಡಿರುವ ಹಾಗೂ ಬಂಧಿಯಾಗಿರುವ ಯುವಕರ ಮನೆಯಲ್ಲಿ ಆತಂಕ, ಭಯದ ವಾತಾವರಣ ಉಂಟಾಗಿದೆ. ಒಂದು ಗಳಿಗೆಯ ಕೋಪ ಏನೇನನ್ನೋ ಮಾಡಿಸಿಬಿಟ್ಟಿದೆ.
ಭಾನುವಾರ ರಾತ್ರಿ ಪಾರ್ಟಿ ಮಾಡಲೆಂದೇ ಗೌರಿಶಂಕರ ನಗರ ನಿವಾಸಿಗಳಾದ ಆಟೋ ಡ್ರೈವರ್ ಕಿರಣ್, ದೀಪಕ್ ಕಿಶನ್, ಸ್ವಾಮಿ (ಮೀಸೆ ಸ್ವಾಮಿ), ಮಧುಕುಮಾರ್, ದಿಲೀಪ್ ಸೇರಿದಂತೆ ಇನ್ನಿಬ್ಬರು ಬಂಡಿಪಾಳ್ಯದ ಎಲೆತೋಟದ ಸಮೀಪ ಇರುವ ಲೇಔಟ್ನಲ್ಲಿ ಸೇರಿದ್ದರು. ಪಾರ್ಟಿಯಲ್ಲಿ ಮಾಂಸದೂಟ ಎಣ್ಣೆ ಜೋರಾಗಿತ್ತು. ಈ ನಡುವೆ ನಶೆ ಏರಿಸಿಕೊಂಡ ಸ್ನೇಹಿತರು, ಮಾತಿನ ಮೇಲೆ ಹಿಡಿತ ಕಳೆದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸತೊಡಗಿದ್ದಾರೆ.
ಮೊದಲೇ ನಿವೇಶನದ ವಿಚಾರವಾಗಿ ನಿಗಿನಿಗಿ ಕೆಂಡಕಾರುತ್ತಿದ್ದ ಸ್ವಾಮಿ (ಮೀಸೆ ಸ್ವಾಮಿ) ಕಿರಣ್ ಜೊತೆ ಭಾನುವಾರ ರಾತ್ರಿ ಜಗಳ ಶುರು ಮಾಡಿದ್ದಾನೆ. ಕೋಪದಿಂದ ಕುದಿಯುತ್ತಿದ್ದ ಸ್ವಾಮಿ (ಮೀಸೆ ಸ್ವಾಮಿ) ತನ್ನ ಬಾಮೈದ ಹಾಗೂ ಸ್ನೇಹಿತರಾದ ದಿಲೀಪ್, ರಘು ಜೊತೆಗೂಡಿ ಮಚ್ಚಿನಿಂದ ಕಿರಣ್ಗೆ ಬಲವಾಗಿ ಹೊಡೆದಿದ್ದಾನೆ. ಈತ ಕುಸಿದು ಬಿದ್ದಾಗ ಈತನ ಸ್ನೇಹಿತ ದೀಪಕ್ ಕಿಶನ್ಗೂ ಮಾರಾಣಾಂತಿಕ ಹಲ್ಲೆ ಮಾಡಿ ಸ್ಥಳದಲ್ಲಿಯೇ ಕೊಚ್ಚಿ ಕೊಂದಿದ್ದಾನೆ.
ಇವರಿಬ್ಬರ ಸ್ನೇಹಿತ ಮಧುಕುಮಾರ್ ಮಚ್ಚಿನೇಟು ತಿಂದು ಪ್ರಾಣಾಪಾಯದಿಂದ ಪಾರಾಗಿ ಕೆ.ಆರ್. ಆಸ್ಪತ್ರೆಯಲ್ಲಿ ಈಗ ಚಿಕಿತ್ಸೆ ಪಡೆಯುತ್ತಿದ್ದಾನೆ. ಯುವಕರ ಕೋಪ ಹಾಗೂ ದ್ವೇಷ ಇಬ್ಬರನ್ನು ಸ್ಮಶಾನಕ್ಕೆ ಕಳುಹಿಸಿದರೆ, ಕೊಲೆ ಮಾಡಿದವರು ಜೈಲಿನಲ್ಲಿ ಮುದ್ದೆ ಮುರಿಯಬೇಕಿದೆ.