ಮೈಸೂರು: ಪ್ರಸ್ತುತ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಪರಿಹಾರ ಕಂಡುಕೊಳ್ಳಲು ದುಂಡು ಮೇಜಿನ ಸಭೆ ನಡೆಸುವಂತೆ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಸಲಹೆ ನೀಡಿದ್ದಾರೆ.
ನಗರದ ಜಗನ್ಮೋಹನ ಅರಮನೆಯಲ್ಲಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘ ರೈತ ಪರ್ವದ ಮೂರನೇ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದಕ್ಕಾಗಿ ಬೆಂಗಳೂರಿನ ಶಾಸಕರ ಭವನದ ಸಭಾಂಗಣದಲ್ಲಿ ಜಾಗ ಕೊಡಿಸುತ್ತೇನೆ. ಅಲ್ಲದೇ ಸಂಬಂಧಪಟ್ಟ ಮಂತ್ರಿಗಳನ್ನು ಸಭೆಗೆ ಕರೆತರುವ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ರೈತರು ಈಗ ಬೆಳೆಗೆ ಯೋಗ್ಯ ಬೆಲೆ ಬಿಟ್ಟರೆ ಏನನ್ನೂ ಕೇಳುತ್ತಿಲ್ಲ. ಇದರಿಂದಾಗಿ ಸರ್ಕಾರಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಮೊದಲು ರೈತ ಸಂಘ, ದಲಿತ ಸಂಘರ್ಷ ಸಮಿತಿ ಅಂದರೇ ಎಲ್ಲರೂ ಹೆದರುತ್ತಿದ್ದರು. ವಿದ್ಯಾರ್ಥಿ ಸಂಘಟನೆಗಳು ಜೋರಾಗಿದ್ದವು. ಪ್ರೊ ನಂಜುಂಡಸ್ವಾಮಿ, ಕೆ.ಎಸ್. ಪುಟ್ಟಣ್ಣಯ್ಯ ಮೊದಲಾದ ನಾಯಕರ ಮಾತಿಗೆ ಬೆಲೆ ಇತ್ತು. ಆದರೆ ಇವತ್ತು ಆ ಪರಿಸ್ಥಿತಿ ಇಲ್ಲ. ಸಂಘಟನೆಗಳು ಒಡೆದು ಚೂರಾಗಿರುವುದು ಇದಕ್ಕೆ ಕಾರಣ ಎಂದು ಅವರು ವಿಷಾದಿಸಿದರು.
ಈಗ ರಾಜಕಾರಣಿಗಳು ಅಧಿಕಾರಿಗಳ ಗುಲಾಮರಾಗಿದ್ದಾರೆ. ಯಾವ್ಯಾವುದೋ ರಾಜ್ಯಗಳಿಂದ ಬರುವ ಅಧಿಕಾರಿಗಳು ಒಂದಿಷ್ಟು ಲೂಟಿ ಹೊಡೆದು ನೀಡುತ್ತಿದ್ದಾರೆ. ರಾಜಕಾರಣಿಗಳು ವೋಟು- ನೋಟು ಎಂದು ಓಡಾಡುತ್ತಿದ್ದಾರೆ. ಆಳುವ ಸರ್ಕಾರ ತಪ್ಪು ಮಾಡಿದಾಗ ಪ್ರಶ್ನಿಸಬೇಕಾದ ವಿರೋಧ ಪಕ್ಷಗಳು ಅಡ್ಜೆಸ್ಟ್ ಮೆಂಟ್ ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿದರು.
ಹಸಿರು ಶಾಲು ಎಂದರೇ ಹಸಿದವನಿಗೆ ಅನ್ನ ನೀಡುವವನು ಎಂದರ್ಥ. ಹೀಗಾಗಿ ರೈತ, ದಲಿತ, ವಿದ್ಯಾರ್ಥಿ ಸಂಘಟನೆಗಳ ಆ ಕಾಲ ಮತ್ತೆ ಬರಬೇಕು. ಈ ಸಂಘಟನೆಗಳು ಪುನರ್ ಸಂಘಟನೆ ಆಗುವುದು ಬದುಕಿಗೆ ಅನಿವಾರ್ಯ. ದೇಶದ ಮೊದಲ ಪ್ರಧಾನಿ ನೆಹರು ಅವರು ಪಂಚವಾರ್ಷಿಕ ಯೋಜನೆಗಳ ಮೂಲಕ ಜನರಿಗೆ ನೆರವಾದರು. ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಜೈ ಜವಾನ್, ಜೈ ಕಿಸಾನ್ ಎಂದು ರೈತರ ಹಾಗೂ ಸೈನಿಕರ ಮಹತ್ವವನ್ನು ಸಾರಿದ್ದರು ಎಂದರು.
ಡಿ. ದೇವರಾಜ ಅರಸರು ಭೂಸುಧಾರಣೆ ಕಾನೂನು ಜಾರಿಗೆ ತಂದರು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಅರಸನ್ನೇ ನಾವು ಮರೆತುಬಿಟ್ಟಿದ್ದೇವೆ. ಎಲ್ಲರಿಗೂ ಶಿಕ್ಷಣ ಮತ್ತು ಆರೋಗ್ಯವನ್ನು ಮಾತ್ರ ಉಚಿತವಾಗಿ ನೀಡಬೇಕು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ನೀಡುತ್ತಿದೆ. ಇದರ ಬದಲು ಶಿಕ್ಷಣ, ಆರೋಗ್ಯ ಉಚಿತವಾಗಿ ನೀಡಿದ್ದರೆ ಸಾಕಾಗಿತ್ತು ಎಂದು ಹೇಳಿದರು.
ಶಕ್ತಿ ಯೋಜನೆಯಡಿ ಮಹಿಳೆಯರು ದೇವಸ್ಥಾನ ಮತ್ತಿತರ ಕಡೆ ಹೋಗಿ ಬರುತ್ತಿದ್ದಾರೆ, ಇರಲಿ ಬಿಡಿ. ಆದರೆ ಈಗ ಉಚಿತವಾಗಿ ನೀಡುತ್ತಿರುವ ಅಕ್ಕಿಗೆ ಕೆಜಿಗೆ 10 ರೂ ನಿಗದಿ ಮಾಡಿದರೆ, ಹತ್ತು ಕೆಜಿಯನ್ನು ರೈತರು 100 ರೂ ಕೊಟ್ಟು ತೆಗೆದುಕೊಳ್ಳುತ್ತಾರೆ. ಈ ರೀತಿ ಗ್ಯಾರಂಟಿ ಕೊಡುವ ಬದಲು ಜನ ಎಲ್ಲಿ ಸುಸ್ತಾಗುತ್ತಿದ್ದಾರೆ ಎಂಬುದನ್ನು ಗಮನಿಸಿ, ಅದಕ್ಕೆ ಪರಿಹಾರ ರೂಪಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಸುಸ್ತಾಗುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ಬಿಲ್ ಕಟ್ಟಲಾಗದೇ ಸುಸ್ತಾಗುತ್ತಿದ್ದಾರೆ. ಈ ಕಡೆ ಗಮನಹರಿಸಬೇಕು ಎಂದು ಸಲಹೆ ಮಾಡಿದರು.
ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ ಡಿ ಗಂಗಾಧರ, ಬೆಂಗಳೂರಿನ ಉದ್ಯಮಿ ವಿಶ್ವನಾಥ್, ಪಾಲಿಕೆ ಮಾಜಿ ಸದಸ್ಯ ಕೆ ವಿ ಶ್ರೀಧರ, ಎಪಿಎಂಸಿ ದಲ್ಲಾಳಿ ಸಂಘದ ಅಧ್ಯಕ್ಷ ಮಿಲಿಟರಿ ಮಹದೇವಪ್ಪ ರೈತ ಪರ್ವ ರಾಜ್ಯ ಗೌರವಾಧ್ಯಕ್ಷ ಜೆ.ಎಂ. ಕುಮಾರ್ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಅಧ್ಯಕ್ಷ ಶಿವಣ್ಣ ಮತ್ತಿತರರು ಹಾಜರಿದ್ದರು.
ಇದನ್ನೂಓದಿ:ತುಮಕೂರು : ಜಮೀನುಗಳಿಗೆ ತೆರಳಿ ಬೆಳೆ ನಷ್ಟದ ಕುರಿತು ಮಾಹಿತಿ ಸಂಗ್ರಹಿಸಿದ ಆರ್ ಅಶೋಕ್