ಮೈಸೂರು: ವಿಶ್ವವಿಖ್ಯಾತ ಸಾಂಸ್ಕೃತಿಕ ನಗರಿ ಮೈಸೂರು ಅರಮನೆಯಲ್ಲಿ ಜಂಬೂಸವಾರಿಗೂ ಮುನ್ನ ಅರಮನೆ ಆವರಣದಲ್ಲಿ ರಾಜರ ಮುಂದೆ ಜಟ್ಟಿ ಕಾಳಗ ನಡೆದು, ವಿಜಯೋತ್ಸವ ಆಚರಿಸಲಾಗುತ್ತದೆ. ಜಟ್ಟಿಕಾಳಗ ಸೆಣಸಾಟದಲ್ಲಿ ಸೋಲು ಗೆಲುವಿಗಿಂತ ರಾಜನ ಶ್ರೇಯಸ್ಸು, ನಂಬಿಕೆ ಹಾಗೂ ರಾಜಮನೆತನದ ಗೌರವವನ್ನು ಎತ್ತಿಹಿಡಿಯಲಾಗುತ್ತೆ.
ಜಟ್ಟಿಗಳು ಹೇಗೆ ಉದಯವಾದರು, ಅವರ ವಿಶೇಷವೇನು?
ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಬ್ರಿಟಿಷರು ಮೈಸೂರು ಅರಮನೆಗೆ ಆಗಾಗ ಬರುತ್ತಿದ್ದರು. ಒಮ್ಮೆ ಹೀಗೆ ಅರಮನೆಗೆ ಬಂದ ಬ್ರಿಟಿಷ್ ಅಧಿಕಾರಿಯೊಬ್ಬ ಮಹಾರಾಜರೊಂದಿಗೆ ಬಂಡೀಪುರಕ್ಕೆ ತೆರಳಿ ಹುಲಿಗಳನ್ನು ನೋಡಿಕೊಂಡು ಬರುತ್ತಾರೆ. ನಂತರ ಅರಮನೆಗೆ ಆಗಮಿಸಿದ ಬ್ರಿಟಿಷ್ ಅಧಿಕಾರಿ, ಹುಲಿಯ ಮೇಲೆ ಯುದ್ಧ ಮಾಡಿ ಗೆಲ್ಲುವಂತಹ ವ್ಯಕ್ತಿಗಳು ನಿಮ್ಮ ಸಂಸ್ಥಾನದಲ್ಲಿ ಇದ್ದಾರಾ ಎಂದು ಸವಾಲು ಹಾಕುತ್ತಾನೆ. ಅದಕ್ಕೆ ಉತ್ತರಿಸಿದ ಮಹಾರಾಜರು ನಮ್ಮಲ್ಲಿ ಇರುವ ಪ್ರತಿಯೊಬ್ಬರು ಶೌರ್ಯವಂತರೆ. ಯುದ್ಧಕ್ಕೂ ರೆಡಿಯಾಗಿದ್ದಾರೆ ಎಂದು ಮರು ಉತ್ತರ ನೀಡುತ್ತಾರಂತೆ.
ಈ ಕಾಳಗವನ್ನು ನಾನು ನೋಡಬೇಕು. ನಾಳೆ ವ್ಯವಸ್ಥೆ ಮಾಡಿ ಎಂದು ಹೇಳಿ ಬ್ರಿಟಿಷ್ ಅಧಿಕಾರಿ ಅಲ್ಲಿಂದ ತೆರಳುತ್ತಾನೆ. ಇದರಿಂದ ಚಿಂತಾಕ್ರಾಂತರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಗಾಢವಾದ ಯೋಚನೆಯಲ್ಲಿ ಮುಳುಗಿರುತ್ತಾರೆ. ಆ ಸಮಯಕ್ಕೆ ಅಲ್ಲಿಗೆ ಬಂದ ಪೈಲ್ವಾನ ಈ ವಿಷಯ ತಿಳಿದು ಹುಲಿಯೊಂದಿಗೆ ಯುದ್ಧ ಮಾಡುತ್ತೇನೆ. ಕಾಳಗವನ್ನು ಅಣಿಗೊಳಿಸಿ ಎಂದು ವಿನಂತಿಸಿ ತೆರಳುತ್ತಾನೆ. ಇದಕ್ಕೆ ಮಣಿದ ರಾಜರು ಕಾಳಗಕ್ಕೆ ವ್ಯವಸ್ಥೆ ಮಾಡುತ್ತಾರೆ. ಈ ಕಾಳಗದಲ್ಲಿ ಆ ಪೈಲ್ವಾನ ಹುಲಿಯನ್ನು ಕೊಲ್ಲುತ್ತಾನೆ. ಬಳಿಕ ಆ ಜಟ್ಟಿಯನ್ನು ಹೆಗಲ ಮೇಲೆ ಹೊತ್ತು, ಆನೆ ಮೇಲೆ ಮೆರವಣಿಗೆ ಮಾಡಿ ಆತನಿಗೆ ಗಂಗಾಧರ ಸುಬ್ಬಾ ಜಿಟ್ಟಪ್ಪ ಎಂದು ಹೆಸರಿಟ್ಟರು. ಇದಾದ ಬಳಿಕ ಗರಡಿ ತೆರೆದು ನೂರಾರು ಯುವಕರಿಗೆ ಕುಸ್ತಿ ಕಲೆಯನ್ನು ಸುಬ್ಬಾ ಜೆಟ್ಟಪ್ಪ ಕಲಿಸಿದರೆಂದು ಹೇಳಲಾಗುತ್ತೆ. ಆಗಿನಿಂದಲೂ ಮೈಸೂರಿನಲ್ಲಿ ಜಟ್ಟಿಗಳಿಗೆ ವಿಶೇಷ ಸ್ಥಾನಮಾನ ನೀಡುತ್ತಾ ಬರಲಾಗಿದೆ.
ವಜ್ರಮುಷ್ಠಿಯ ಏಟಿಗೆ ಎದುರಾಳಿ ನೆತ್ತಿಯಲ್ಲಿ ನೆತ್ತರು :
ಅರಮನೆ ಆವರಣದಲ್ಲಿ ಒಡೆಯರ್ ಸಮ್ಮುಖದಲ್ಲಿ ನಡೆಯುವ ಜಟ್ಟಿ ಕಾಳಗಕ್ಕೂ ಮುನ್ನ ಎಲ್ಲ ಪೈಲ್ವಾನರು 9 ದಿನ ಉಪವಾಸ ವ್ರತ ಕೈಗೊಳ್ಳುತ್ತಾರೆ. ನಂತರ ಜಟ್ಟಿ ಕಾಳಗ ನಡೆಸುತ್ತಾರೆ. ಕಾಳಗದಲ್ಲಿ ವಜ್ರಮುಷ್ಠಿಯ ಏಟು ಈಗಲೂ ಎದುರಾಳಿ ನೆತ್ತಿಯಲ್ಲಿ ನೆತ್ತರು ಚಿಮ್ಮಿಸುತ್ತದೆ. ಮೊದಲು ಯಾರ ನೆತ್ತಿಯಲ್ಲಿ ರಕ್ತ ಸುರಿಯುತ್ತದೇ ಆತ ಸೋತಂತೆ. ಆದರೆ, ಇಲ್ಲಿ ಸೋತ-ಗೆದ್ದ ಇಬ್ಬರಿಗೂ ರಾಜಮನೆತನದಿಂದ ಗೌರವ ಹಾಗೂ ಗೌರವಧನ ಸಿಗುತ್ತದೆ.