ಮೈಸೂರು: ನಗರದ ಟಿ.ಕೆ ಲೇಔಟ್ನಲ್ಲಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಮನೆ ಮುಂದೆ ರೈತ ಸಂಘ ಹಾಗೂ ಐಟಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.
ನಂಜನಗೂಡು ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಐಟಿಸಿ ಕಾರ್ಖಾನೆ ಮೇಲಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ವಜಾಗೊಳಿಸಿರುವ ಕಾರ್ಮಿಕರನ್ನು ಮರು ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಐಟಿಸಿ ಕಾರ್ಖಾನೆ ವ್ಯವಸ್ಥಾಪಕ ರಾಜೇಂದ್ರ ಬಾಬು ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಕಾರ್ಮಿಕರು ಮನವಿ ಮಾಡಿಕೊಂಡರು.
ಇದನ್ನು ಓದಿ: ಪತಿ ಬೇಡ, ಪ್ರೇಮಿ ಬೇಕು.. ನಾಪತ್ತೆಯಾಗಿದ್ದ ಗೃಹಿಣಿ ಪ್ರಿಯಕರನೊಂದಿಗೆ ಪತ್ತೆ
ಪ್ರತಿಭಟನಾಕಾರರು ಹಾಗೂ ರೈತ ಮುಖಂಡ ವಿದ್ಯಾಸಾಗರ್ ಸೇರಿದಂತೆ ಕಾರ್ಖಾನೆಯ ಐದು ಜನರನ್ನು ನಿವಾಸಕ್ಕೆ ಕರೆದು ಸಿದ್ದರಾಮಯ್ಯ ಮನವಿ ಸ್ವೀಕರಿಸಿ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ನಾಳೆ ಕಾರ್ಖಾನೆಯವರು ಹಾಗೂ ಕಾರ್ಮಿಕ ಉಪ ಆಯುಕ್ತರೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು. ಈ ಬಳಿಕ ಪ್ರತಿಭಟನಾಕಾರರು ಹೋರಾಟ ಕೈಬಿಟ್ಟಿದ್ದಾರೆ.