ಮೈಸೂರು : ಕೃಷಿ ಕ್ಷೇತ್ರದ ಸುಸ್ಥಿರ ಬೆಳವಣಿಗೆಗೆ ಇಸ್ರೋ ನೆರವಾಗುತ್ತಿದ್ದು, ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನದ ಮೂಲಕ ಉಪಗ್ರಹ ಕಳುಹಿಸಿದ ದತ್ತಾಂಶದ ಆಧಾರದ ಮೇಲೆ ಬೆಳೆಯ ಫಸಲಿನ ಅವಧಿ ಹಾಗೂ ಇಳುವರಿ ಎಷ್ಟಿದೆ ಎಂಬುದನ್ನು ಅಂದಾಜಿಸಲಾಗುತ್ತಿದೆ ಎಂದು ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ್ ಹೇಳಿದರು.
ನಗರದ ಕೇಂದ್ರ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು (ಸಿಎಫ್‌ಟಿಆರ್‌ಐ) ಆಯೋಜಿಸಿದ್ದ 9ನೇ ಅಂತರರಾಷ್ಟ್ರೀಯ ಆಹಾರ ಸಮ್ಮೇಳನಕ್ಕೆ ಡಾ.ಎಸ್.ಸೋಮನಾಥ್ ಗುರುವಾರ ಸಂಜೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೇರಳದ ತೆಂಗು ಕೃಷಿಗೆ ರೋಗದಿಂದ ಆದ ನಷ್ಟವನ್ನು ತಪ್ಪಿಸಲು ರಿಮೋಟ್ ಸೆನ್ಸಿಂಗ್ ವಿಧಾನದ ಮೂಲಕ ಸಂಶೋಧನೆ ನಡೆಸಿ ಪರಿಹಾರ ಕಂಡುಕೊಳ್ಳಲಾಯಿತು. ಅದನ್ನು ಇದೀಗ ಎಲ್ಲ ಬೆಳೆಗಳಿಗೆ ವಿಸ್ತರಿಸಲಾಗುತ್ತಿದೆ. ಆಹಾರ ಭದ್ರತೆ ಹಾಗೂ ಬೆಳೆ ಇಳುವರಿ ಹೆಚ್ಚಿಸಲೂ ಇಸ್ರೋ ನೆರವಾಗುತ್ತಿದೆ ಎಂದರು.
ವಾತಾವರಣ ಬದಲಾವಣೆ ಬಗ್ಗೆ ಇಸ್ರೋದಿಂದ ಮಾಹಿತಿ: ಹವಾಮಾನ ಹಾಗೂ ವಾತಾವರಣದ ಬದಲಾವಣೆ ಮಾಹಿತಿಯನ್ನು ಸಂಸ್ಥೆ ನೀಡುತ್ತಿದೆ. ಸಮುದ್ರದ ಉಷ್ಣತೆ, ನೀರಿನಲ್ಲಿರುವ ಪೋಷಕಾಂಶಗಳು, ಮೀನಿನ ಬೆಳವಣಿಗಗೆ ಪೂರಕವಾದ ವಾತಾವರಣ ಉಪಗ್ರಹ ಪರೀಕ್ಷಿಸುತ್ತಿವೆ. ಹೆಚ್ಚು ಮೀನು ಸಿಗುವ ಸ್ಥಳಗಳನ್ನು ಕರಾವಳಿಯ ಮೀನುಗಾರರಿಗೆ ಹೈದರಾಬಾದ್‌ನ ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರದ ಮೂಲಕ ನೀಡಲಾಗುತ್ತಿದೆ. ಇಸ್ರೊದ ರಿಸೋರ್ಸ್‌ಸ್ಯಾಟ್ ಉಪಗ್ರಹಗಳು ದೇಶದ ಅಂತರ್ಜಲ ಹಂಚಿಕೆ, ಜಲ ಮರುಪೂರಣ ವ್ಯವಸ್ಥೆಯ ಸಂರಚನೆಯ ಮಾಹಿತಿ ನೀಡುತ್ತಿವೆ. ಅದರ ಆಧಾರದ ಮೇಲೆ ಕೊರೆಯಲಾದ ಶೇ 90ರಷ್ಟು ಕೊಳವೆ ಬಾವಿಗಳು ಯಶಕಂಡಿವೆ ಎಂದು ಸೋಮನಾಥ್ ಮಾಹಿತಿ ನೀಡಿದರು.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಸಿಎಫ್‌ಟಿಆರ್‌ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್, ಭಾರತೀಯ ಆಹಾರ ವಿಜ್ಞಾನಿಗಳು ಮತ್ತು ತಂತ್ರಜ್ಞರ ಸಂಘದ (ಎಎಫ್‌ಎಸ್‌ಟಿಐ) ಅಧ್ಯಕ್ಷ ಡಾ.ಎನ್.ಭಾಸ್ಕರ್, ಸೇರಿದಂತೆ ಇತರ ಗಣ್ಯರು ವೇದಿಕೆಯಲ್ಲಿ ಇದ್ದರು.
ಇದನ್ನೂ ಓದಿ: ಮೈಸೂರಿನಿಂದ ರಾಮೇಶ್ವರಂಗೆ ರೈಲುಸೇವೆ ಆರಂಭಿಸಲು ರೈಲ್ವೇ ಸಚಿವರಿಗೆ ಪ್ರತಾಪ್ ಸಿಂಹ ಮನವಿ