ಮೈಸೂರು: ಬಿಜೆಪಿ ನಾಯಕರ ಕಿತ್ತಾಟದಿಂದ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಲಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದಿದ್ದಾರೆ.
ಹುಣಸೂರು ತಾಲ್ಲೂಕಿನ ಗದ್ದಿಗೆ ಗ್ರಾಮದ ಕೆಂಡಗಣೇಶ್ವರಸ್ವಾಮಿ ದೇವಸ್ಥಾನದ ಸಮೀಪ ಏರ್ಪಡಿಸಿದ್ದ ಜೆಡಿಎಸ್ ಬೃಹತ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕಿತ್ತಾಟದಿಂದ ಮತ್ತೆ ಚುನಾವಣೆ ಬರಲಿದೆ,ಕಾರ್ಯಕರ್ತರು ಸಜ್ಜಾಗಿ ಎಂದರು. 22ರಂದು ಅನರ್ಹ ಶಾಸಕರ ಬಗ್ಗೆ ಸುಪ್ರೀಂಕೋಟ್೯ನಿಂದ ತೀರ್ಪು ಬರಲಿದೆ, ಅದನ್ನು ನೋಡಿಕೊಂಡು ರಾಜ್ಯದ 15 ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿಂತೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಪಟ್ಟಿ ಬಿಡುಗಡೆ ಮುನ್ನ ಎಲ್ಲ ಕ್ಷೇತ್ರದ ಕಾರ್ಯಕರ್ತರೊಡನೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದಾಗ ಸೋನಿಯಾಗಾಂಧಿ ಅವರು ಕರೆ ಮಾಡಿದಾಗ ಮಲ್ಲಿಕಾರ್ಜುನ ಖರ್ಗೆ ಅಥವಾ ಮುನಿಯಪ್ಪ ಅವರಿಗೆ ಮುಖ್ಯಮಂತ್ರಿ ಹುದ್ದೆ ಕೊಡಿ. ನಾವು ಬೆಂಬಲ ಸೂಚಿಸುತ್ತೇವೆಂದು ನಾನು ಹೇಳಿದ್ದೆ. ಆದರೆ ಸೋನಿಯಾಗಾಂಧಿ ಅವರೇ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿ ಅಂದ್ರು. ಅದಕ್ಕೆ ನಾನು ಕೂಡ ಸಮ್ಮತಿ ಕೊಟ್ಟೆ. ಬಲವಂತವಾಗಿ ನಮ್ಮ ಪಕ್ಷ ಸಿಎಂ ಸ್ಥಾನ ಕೇಳಲಿಲ್ಲ ಎಂದರು.