ಮೈಸೂರು: ಲೋಕಸಭೆಯ ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿಯಿಂದ ನೆಗೆದು, ಸಂಸತ್ ಕಲಾಪಕ್ಕೆ ಅಡ್ಡಿ ಮಾಡಿದಲ್ಲದೇ ಸ್ಮೋಕ್ ಗ್ಯಾಸ್ ಸಿಡಿಸಿದ ಮೈಸೂರು ಮೂಲದ ಮನೋರಂಜನ್ ಮನೆಗೆ ಕೇಂದ್ರ ಗುಪ್ತಚರ ಇಲಾಖೆಯ ಸ್ಥಳೀಯ ಅಧಿಕಾರಿಗಳು ಹಾಗೂ ರಾಜ್ಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆತ ಓದುತ್ತಿದ್ದ ಪುಸ್ತಕಗಳು ಹಾಗೂ ಆತನ ಇತರ ವಿಚಾರಗಳ ಬಗ್ಗೆ ಕೆಲವು ಮಾಹಿತಿಯನ್ನು ಪಡೆದಿದ್ದಾರೆ.
ಬುಧವಾರ ಲೋಕಸಭೆಯ ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ತನ್ನ ಸಹಚರ ಸಾಗರ್ ಶರ್ಮಾನೊಂದಿಗೆ ಸಂಸತ್ ಭವನದಲ್ಲಿ ಕಲರ್ ಸ್ಮೋಕ್ ಪಟಾಕಿ ಸಿಡಿಸಿ ಅನಾಹುತ ಸೃಷ್ಟಿಸಿದ ಆರೋಪದ ಮೇಲೆ ಐದು ಜನರನ್ನು ಬಂಧಿಸಿದ್ದು, ಅದರಲ್ಲಿ ಮೈಸೂರಿನ ವಿಜಯನಗರದ ಎರಡನೇ ಹಂತದಲ್ಲಿರುವ ಡಿ.ಮನೋರಂಜನ್ ಕೂಡ ಒಬ್ಬರಾಗಿದ್ದಾರೆ.
ಮನೋರಂಜನ್ ಪೂರ್ವಾಪರ ವಿಚಾರಿಸಲು ಇಂದು ಮೈಸೂರಿನಲ್ಲಿರುವ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು ಹಾಗೂ ರಾಜ್ಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಆತನ ಮನೆಗೆ ಭೇಟಿ ನೀಡಿದ್ದರು. ಮನೆಯಲ್ಲಿದ್ದ ತಂದೆ ದೇವರಾಜೇಗೌಡ, ತಾಯಿ ಹಾಗೂ ತಂಗಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಆತನ ಹವ್ಯಾಸ, ಆತ ಏನು ಮಾಡುತ್ತಿದ್ದ, ಆತನ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ ಹಾಗೂ ಜಾಲತಾಣಗಳಲ್ಲಿ ಸಕ್ರೀಯನಾಗಿರುವ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು, ಆತನ ರೂಮಿನಲ್ಲಿರುವ ಪುಸ್ತಕಗಳು ಸೇರಿದಂತೆ ಇತರ ವಿಚಾರಗಳನ್ನು ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ. ಆತನ ಸಹಚರ ಸಾಗರ್ ಶರ್ಮಾ ಬಗ್ಗೆಯೂ ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕಿದ್ದಾರೆ.
ಉತ್ತರ ಪ್ರದೇಶ ಮೂಲದ ಸಾಗರ್ ಶರ್ಮಾ ತಮ್ಮ ಮಗ ಮನೋರಂಜನ್ ಜೊತೆ ಮೈಸೂರಿಗೆ ಎರಡು ಬಾರಿ ಆಗಮಿಸಿದ್ದ. ಊಟ ಸಹ ಮಾಡಿದ್ದರು. ಈ ಸಂದರ್ಭದಲ್ಲಿ ತಮ್ಮ ಮಗ ಆತ ನನ್ನ ಸ್ನೇಹಿತ, ಕನ್ನಡ ಬರುವುದಿಲ್ಲ ಎಂದಷ್ಟೇ ಹೇಳಿದ್ದನು ಎಂದು ಅಧಿಕಾರಿಗಳಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಮನೋರಂಜನ್, 'ಭಗತ್ ಸಿಂಗ್ ಫ್ಯಾನ್ ಕ್ಲಬ್' ಎಂಬ ಸಾಮಾಜಿಕ ಮಾಧ್ಯಮ ಪುಟದೊಂದಿಗೆ ಸಂಬಂಧ ಹೊಂದಿರುವ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಸಂಸತ್ ಸದನಕ್ಕೆ ನುಗ್ಗಿದ್ದಲ್ಲದೇ ಸ್ಮೋಕ್ ಪಟಾಕಿ ಸಿಡಿಸಿ ಕೋಲಾಹಲ ಎಬ್ಬಿಸಿದ 34 ವರ್ಷದ ಮನೋರಂಜನ್, ಮೈಸೂರು ಮೂಲದವನೆಂದು ಗೊತ್ತಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಸ್ಥಳೀಯ ಪೊಲೀಸರು, ಆತನ ಹಿನ್ನೆಲೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೆಲವು ಪ್ರಾಥಮಿಕ ಮಾಹಿತಿಗಳು ಲಭ್ಯವಾಗಿದ್ದು ಮನೋರಂಜನ್ ಇಂಜಿನಿಯರಿಂಗ್ ಪದವೀಧರ ಎಂಬುದು ಗೊತ್ತಾಗಿದೆ. ಕ್ರಾಂತಿಕಾರಿ ಬರಹವುಳ್ಳ ಪುಸ್ತಕಗಳನ್ನು ಓದಿಕೊಂಡಿದ್ದ ಆತ, ಸ್ವಾತಂತ್ರ್ಯ ಹೋರಾಟಗಾರ 'ಭಗತ್ ಸಿಂಗ್ ಫ್ಯಾನ್ ಕ್ಲಬ್' ರಚಿಸಿಕೊಂಡಿದ್ದರು ಎಂಬ ಅಂಶ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ಮಾಹಿತಿ ನೀಡಿದ್ದಾರೆ.
"ಸದ್ಯಕ್ಕೆ ಆತನಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇರುವುದು ಕಂಡು ಬಂದಿಲ್ಲ. ಮನೋರಂಜನ್ ತುಂಬಾ ಶಾಂತ ವ್ಯಕ್ತಿ. ಆದರೆ, ಅವರು ಓದಿದ ಪುಸ್ತಕಗಳನ್ನು ನೋಡಿದಾಗ ಅವರು 'ಕ್ರಾಂತಿಕಾರಿ' ಎಂದು ತೋರುತ್ತಿದ್ದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಗತ್ ಸಿಂಗ್ ಗುಂಪು ಕಟ್ಟಿಕೊಂಡು ಹೋರಾಟಕ್ಕೆ ಇಳಿದಿದ್ದು, ಮನೋರಂಜನ್ ಅದನ್ನು ಪುನರಾವರ್ತಿಸಲು ಬಯಸಿದಂತಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಆತನ ವರ್ತನೆಯನ್ನು ಊಹಿಸಿಕೊಂಡಿದ್ದಾರೆ. "ಮನೋರಂಜನ್ ಬಹಳಷ್ಟು ಪುಸ್ತಕಗಳನ್ನು ಓದುತ್ತಿದ್ದರು. ವಿಶೇಷವಾಗಿ ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ಓದುತ್ತಿದ್ದರು" ಎಂದು ಆತನ ತಂದೆ ದೇವರಾಜೇಗೌಡ ಕೂಡ ಮಾಹಿತಿ ನೀಡಿದ್ದಾರೆ.
ಏರಿಯಾದಲ್ಲಿ ಒಳ್ಳೆಯ ಹುಡುಗ: ಇಂಜಿನಿಯರ್ ಪದವೀಧರನಾಗಿರುವ 34 ವರ್ಷದ ಮನೋರಂಜನ್ ಏನಾದರೂ ಸಾಧಿಸಬೇಕು, ಹೆಸರು ಮಾಡಬೇಕು ಎಂಬ ಆಸೆ ಇಟ್ಟುಕೊಂಡಿದ್ದ. ಆತನಿಗೆ ಬಟ್ಟೆ, ಇತರ ಯಾವುದೇ ಶೋಕಿಗಳು ಇರಲಿಲ್ಲ. ಮನೆಯಲ್ಲಿದ್ದಾಗ ಪುಸ್ತಕ ಓದುವುದು ಹಾಗೂ ಹೊರಗಡೆ ಬೆಂಗಳೂರು, ದೆಹಲಿಗೆ ಹೋಗಿ ಬರುತ್ತೇನೆ ಎಂದು ನನ್ನಿಂದಲೇ ಹಣ ಪಡೆದು ಹೋಗುತ್ತಿದ್ದ. ಜೊತೆಗೆ ಬೆಂಗಳೂರಿನಲ್ಲಿ ತನ್ನ ವಿವಾಹಿತ ತಂಗಿಯನ್ನು ಭೇಟಿ ಮಾಡಿ ಬರಲು ಕೆಲವು ಸಲ ಹೋಗುತ್ತಿದ್ದ. ಮಗನಿಗೆ ಗೆಳೆಯರು ಯಾರು ಇರಲಿಲ್ಲ. ಜೊತೆಗೆ ಅಕ್ಕಪಕ್ಕದಲ್ಲಿ ಯಾರಿಗೂ ಪರಿಚಯ ಇರಲಿಲ್ಲ ಎಂದು ಮಾಧ್ಯಮಗಳಿಗೆ ಮನೋರಂಜನ್ ತಂದೆ ನಿನ್ನೆ ಮಾಹಿತಿ ನೀಡಿದ್ದರು.
ಒಳ್ಳೆಯ ಹುಡುಗ ಎಂದು ಅಕ್ಕಪಕ್ಕದವರು ಹೇಳುತ್ತಾರೆ. ಜೊತೆಗೆ ಈತ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದ. ಪುಸ್ತಕ ಓದುವುದರಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದ. ಈತ ಜಾಲತಾಣಗಳಲ್ಲಿ ಸಕ್ರೀಯನಾಗಿದ್ದು, ಏರಿಯಾದಲ್ಲಿ ಒಳ್ಳೆಯ ಹುಡುಗ ಎಂಬ ಹೆಸರು ಪಡೆದಿದ್ದ. ನಿನ್ನೆ ವಿಜಯನಗರ ಭಾಗದ ಎಸಿಪಿ ಗಜೇಂದ್ರ ಪ್ರಸಾದ್ ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದು, ಇಂದು ರಾಜ್ಯ ಗುಪ್ತಚರ ಇಲಾಖೆ ಹಾಗೂ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು ಮನೋರಂಜನ್ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಬಿಗಿಯಾದ ಪೋಲಿಸ್ ಬಂದೋಬಸ್ತ್: ದೆಹಲಿಯಲ್ಲಿ ಘಟನೆ ನಡೆಯುತ್ತಿದ್ದಂತೆ ಮನೋರಂಜನ್ ಬಂಧನವಾಗಿತ್ತು. ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ತಂದೆ ದೇವರಾಜೇಗೌಡ, ಮಗನ ಈ ಕೃತ್ಯವನ್ನು ಸಹಿಸುವುದಿಲ್ಲ. ತಪ್ಪಿತಸ್ಥನಾದರೆ ಗಲ್ಲಿಗೇರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇಂದು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಮನೆಗೆ ಬಂದ ಗುಪ್ತಚರ ಇಲಾಖೆಯ ಅಧಿಕಾರಿಗಳಿಗೆ ಮಾತ್ರ ಮಾಹಿತಿ ನೀಡಿ ಮನೆಯಿಂದ ಮಧ್ಯಾಹ್ನ ಹೊರಗೆ ಹೋದರು. ಈ ಸಂದರ್ಭದಲ್ಲಿ ಮನೋರಂಜನ್ ಮನೆಯ ಸಮೀಪ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.
ಇದನ್ನೂ ಓದಿ: ‘ತಪ್ಪು ಮಾಡಿದರೆ ಗಲ್ಲಿಗೆ ಏರಿಸಿ’: ಸಂಸತ್ನ ಸದನಕ್ಕೆ ನುಗ್ಗಿದ ಮನೋರಂಜನ್ ತಂದೆಯ ಪ್ರತಿಕ್ರಿಯೆ!