ಮೈಸೂರು : ಜಿಲ್ಲೆಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಈ ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಬೋನುಗಳನ್ನ ಅಳವಡಿಸಲಾಗಿದೆ. ಈ ಬೋನುಗಳಿಗೆ ಬೀಳುವ ಚಿರತೆಗಳನ್ನು ಅರಣ್ಯ ಇಲಾಖೆ ಕಾಡಿಗೆ ಬಿಡುವ ಮುನ್ನ ಮೈಕ್ರೋ ಚಿಪ್ ಅಳವಡಿಸುವ ಕಾರ್ಯವನ್ನು ಮಾಡುತ್ತಿದೆ. ಇನ್ನು, ಈ ಚಿರತೆಗಳಿಗೆ ಮೈಕ್ರೋ ಚಿಪ್ನನ್ನು ಹೇಗೆ ಅಳವಡಿಸಲಾಗುತ್ತದೆ ಎಂಬ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಬಸವರಾಜು ಅವರು 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.
ಇನ್ನು, ಜಿಲ್ಲೆಯಲ್ಲಿ ಚಿರತೆ ಹಾವಳಿ, ಚಿರತೆ ದಾಳಿ, ಚಿರತೆ ಸೆರೆ ಸುದ್ದಿಗಳನ್ನು ನಾವು ನೋಡಿರುತ್ತೇವೆ. ಹೀಗೆ ಸೆರೆ ಸಿಕ್ಕ ಚಿರತೆಗಳನ್ನು ಕಾಡಿಗೆ ಬಿಡುವ ಮುನ್ನ ಅರಣ್ಯ ಇಲಾಖೆ ಅವುಗಳಿಗೆ ಮೈಕ್ರೋ ಚಿಪ್ ಅಳವಡಿಸುತ್ತದೆ. ಇದು ಈ ಚಿರತೆಗಳ ಮೇಲೆ ನಿಗಾ ಇಡಲು ಸಹಕಾರಿಯಾಗುತ್ತದೆ. ಈ ಸೆರೆ ಸಿಕ್ಕ ಚಿರತೆಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿ ಅವುಗಳಿಗೆ ಮೈಕ್ರೋ ಚಿಪ್ ಅಳವಡಿಸುತ್ತಾರೆ.
ಮೈಕ್ರೋ ಚಿಪ್ ಅಳವಡಿಕೆ ಹೇಗೆ ? : ಬೋನಿನಲ್ಲಿ ಸೆರೆ ಸಿಕ್ಕ ಚಿರತೆಗಳಿಗೆ ಮೈಕ್ರೋ ಚಿಪ್ ಅಳವಡಿಕೆ ಯೋಜನೆಯನ್ನು ಅರಣ್ಯ ಇಲಾಖೆ ಕೈಗೊಂಡಿದೆ. ಸೆರೆ ಸಿಕ್ಕ ಚಿರತೆಯ ಬಾಲದ ಬುಡದಲ್ಲಿ ನೀಡಲ್ ತರದ ಒಂದು ಮೈಕ್ರೋ ಚಿಪ್ನ್ನು ಅಳವಡಿಸಲಾಗುತ್ತದೆ. ಈ ಮೈಕ್ರೋ ಚಿಪ್ ನಲ್ಲಿ ಬಾರ್ ಕೋಡ್ ರೀತಿಯ ಗುರುತು ಹಾಗೂ ಒಂದು ಯೂನಿಕ್ ನಂಬರ್ ಇರುತ್ತದೆ. ಈ ನಂಬರ್ ಪರಿಶೀಲಿಸಿದಾಗ ಈ ಚಿರತೆಯನ್ನು ಹಿಂದೆ ಎಲ್ಲಿ ಸೆರೆ ಹಿಡಿಯಲಾಗಿತ್ತು, ವಯಸ್ಸು, ಗಂಡು ಅಥವಾ ಹೆಣ್ಣೋ, ಎಷ್ಟು ಜನರ ಮೇಲೆ ದಾಳಿ ಮಾಡಿದೆ ಈ ರೀತಿಯ ಎಲ್ಲಾ ಮಾಹಿತಿಯನ್ನು ಮೈಕ್ರೋ ಚಿಪ್ನಲ್ಲಿ ಅಳವಡಿಸಲಾಗಿರುತ್ತದೆ.
ಇನ್ನು, ಸೆರೆ ಸಿಕ್ಕ ಚಿರತೆಗಳಿಗೆ ಮೈಕ್ರೋ ಚಿಪ್ ಅಳವಡಿಸಿದ ಗುರುತಿಗೆ ಚಿರತೆಯ ಕಿವಿಯನ್ನು V ಆಕಾರದಲ್ಲಿ ಕತ್ತರಿಸಲಾಗುವುದು. ಇದು ಜನವಸತಿ ಪ್ರದೇಶದಲ್ಲಿ ಮತ್ತೆ ಚಿರತೆ ಸೆರೆ ಸಿಕ್ಕರೆ ಈ ಮೂಲಕ ಕಂಡುಹಿಡಿಯಲು ಸಹಾಯವಾಗುತ್ತದೆ. ಸೆರೆ ಸಿಕ್ಕ ಚಿರತೆಗೆ ಅರವಳಿಕೆ ಮದ್ದು ನೀಡಿ ನಂತರ ಮೈಕ್ರೋ ಚಿಪ್ ಅಳವಡಿಸಲಾಗುತ್ತದೆ. ಜೊತೆಗೆ ಈ ಕಿವಿ ಕತ್ತರಿಸುವಾಗಲೂ ಅರವಳಿಕೆ ಮದ್ದು ನೀಡಲಾಗುತ್ತದೆ. ಈ ಮೈಕ್ರೋ ಚಿಪ್ ಅಳವಡಿಕೆಯಿಂದ ಚಿರತೆಯ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಡಿಸಿಎಫ್ ಬಸವರಾಜು ಹೇಳುತ್ತಾರೆ.
ಚಿರತೆಗಳು ನಗರ ಪ್ರದೇಶಗಳಿಗೆ ಬರಲು ಕಾರಣವೇನು : 1990ರ ನಂತರ ಸತ್ತ ಪ್ರಾಣಿಗಳ ಮಾಂಸವನ್ನು ತಿನ್ನಲು ಬರುತ್ತಿದ್ದ ರಣ ಹದ್ದುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ನಗರ ಪ್ರದೇಶಗಳಲ್ಲಿ ಸತ್ತ ಪ್ರಾಣಿಗಳನ್ನು ನಾಯಿಗಳು ಪ್ರಾರಂಭಿಸಿದವು. ಇದರಿಂದಾಗಿ ನಾಯಿಗಳ ಸಂಖ್ಯೆ ಜನವಸತಿ ಪ್ರದೇಶದಲ್ಲಿ ಹೆಚ್ಚಾಗಿದ್ದು, ಈ ನಾಯಿಗಳನ್ನು ತಿನ್ನಲು ಚಿರತೆಗಳು ನಗರ ಪ್ರದೇಶಗಳಿಗೆ ಬರುತ್ತಿವೆ ಎಂದು ಡಿಸಿಎಫ್ ಬಸವರಾಜು ಅಭಿಪ್ರಾಯಪಟ್ಟಿದ್ದಾರೆ.
ಇನ್ನು, ಮೊನ್ನೆ ನಂಜನಗೂಡಿನ ಬಳಿ ಚಿರತೆಯೊಂದು ಜಮೀನಿನಲ್ಲಿ ಇರಿಸಿದ್ದ ಉರುಳಿಗೆ ಬಿದ್ದು ಸಾವನ್ನಪ್ಪಿತ್ತು. ಈ ಬಗ್ಗೆ ವೈಲ್ಡ್ ಲೈಫ್ ಆ್ಯಕ್ಟ್ ಪ್ರಕಾರ ಆರೋಪಿ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಡಿಸಿಎಫ್ ಬಸವರಾಜು ಇದೇ ಸಂದರ್ಭದಲ್ಲಿ ಹೇಳಿದರು.
ಇದನ್ನೂ ಓದಿ : ಮೈಸೂರು: ಉರುಳಿಗೆ ಸಿಲುಕಿ 3 ವರ್ಷದ ಹೆಣ್ಣು ಚಿರತೆ ಸಾವು