ಮೈಸೂರು: ಕಬಿನಿಯ ಬ್ಯಾಕ್ ವಾಟರ್ ಫೀಮೇಲ್ ಎಂಬ ಖ್ಯಾತಿ ಪಡೆದಿದ್ದ ಹೆಣ್ಣು ಹುಲಿ ಕಾದಾಟದಲ್ಲಿ ಗಾಯಗೊಂಡಿದ್ದು, ಈ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ಮದ್ದು ನೀಡಿ ಸೆರೆ ಹಿಡಿದು, ಚಿಕಿತ್ಸೆಗಾಗಿ ಮೈಸೂರಿನ ಕೂರ್ಗಳ್ಳಿಯ ಪುನರ್ವಸತಿ ಕೇಂದ್ರಕ್ಕೇ ತರಲಾಗಿದೆ. ಇಲ್ಲಿ ಚಿಕಿತ್ಸೆ ಮುಂದುವರಿದಿದೆ.
ನಾಗರಹೊಳೆಯ ಜಿ ಬಿ. ಕುಪ್ಪೆ ಅರಣ್ಯ ವಲಯದಲ್ಲಿ ಬರುವ ಕಾಕನಕೋಟೆ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ಗಸ್ತಿನಲ್ಲಿ ಇದ್ದಾಗ ಫೆಬ್ರವರಿ 12 ರಂದು ಹುಲಿಯೊಂದು ಅರಣ್ಯ ಪ್ರದೇಶದಲ್ಲಿ ಹುಲಿಗಳೊಂದಿಗೆ ಕಾದಾಟ ನಡೆಸಿ, ಗಾಯಗೊಂಡು ಕುಂಟುತ್ತ ಸಾಗಿತ್ತು. ಈ ಬಗ್ಗೆ ಗಮನಿಸಿದ ಗಸ್ತಿನ ಸಿಬ್ಬಂದಿ ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಗಾಯಗೊಂಡಿರುವ ಹುಲಿಯ ಸೆರೆಗೆ ಮಂಗಳವಾರ ಮಧ್ಯಾಹ್ನ ಅರಣ್ಯ ಸಿಬ್ಬಂದಿ ಹಾಗೂ ಸಾಕಾನೆಗಳ ಸಹಾಯದಿಂದ ಕಾರ್ಯಾಚರಣೆ ನಡೆಸಿದ್ದಾರೆ.
ಈ ಹುಲಿಯನ್ನು ಬಳ್ಳೆ ಅರಣ್ಯ ಪ್ರದೇಶದ ಮಾಸ್ತಿಗುಡಿ ದೇವಾಲಯದ ಮುಂಭಾಗದಲ್ಲಿ ಅರಣ್ಯ ಇಲಾಖೆಯ ವೈದ್ಯರು ಅರವಳಿಕೆ ಮದ್ದು ನೀಡಿ ಸೆರೆ ಹಿಡಿದಿದ್ದಾರೆ. ಸೆರೆ ಹಿಡಿದ ಈ ಹುಲಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಹಸ್ತಾಂತರಿಸಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವೈದ್ಯರಾದ ಡಾ.ರಮೇಶ್ ಮಾಹಿತಿ ನೀಡಿದರು.
ತಾಯಿ ಹುಲಿ ಸೆರೆ- ನಾಲ್ಕು ಮರಿಗಳು ಅನಾಥ: ಸಾಮಾನ್ಯವಾಗಿ ಸಫಾರಿ ವೇಳೆಯಲ್ಲಿ ಕಬಿನಿ ಹಿನ್ನೀರಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಬಿನಿ ಬ್ಯಾಕ್ ವಾಟರ್ ಫಿಮೇಲ್ ಎಂಬ ಈ ಹುಲಿ 8-9 ವರ್ಷ ಪ್ರಾಯವಾಗಿದ್ದು, ಹುಲಿಗಳ ಕಾದಾಟದಲ್ಲಿ ಹುಲಿಯ ಮುಂಭಾಗದ ಪಾದ, ಭುಜದ ಭಾಗಕ್ಕೆ ಗಾಯವಾಗಿದೆ. ಒಂದು ಕೋರೆ ಹಲ್ಲು ಸಹ ಮುರಿದಿದೆ. ಈ ಹುಲಿಗೆ ಒಂದು ವರ್ಷ ಪ್ರಾಯದ ನಾಲ್ಕು ಮರಿಗಳಿವೆ. ಅವುಗಳ ಸ್ಥಿತಿ ಗತಿ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಮಾಹಿತಿ ಪಡೆಯುತ್ತಿದ್ದು, ಚಿಕಿತ್ಸೆ ನಂತರ ಹುಲಿಯನ್ನು ಕಾಡಿಗೆ ಬಿಡಬೇಕೋ ಅಥವಾ ಕೂರ್ಗಳ್ಳಿಯ ಪುನರ್ವಸತಿ ಕೇಂದ್ರದಲ್ಲಿ ಇಟ್ಟುಕೊಳ್ಳಬೇಕೊ ಎಂಬ ಬಗ್ಗೆ ಮೇಲಾಧಿಕಾರಿಗಳ ತಿರ್ಮಾನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಎರಡನೇ ಪ್ರಕರಣ: ನಾಗರಹೊಳೆ ಅರಣ್ಯ ಪ್ರದೇಶದ ಅಂತರಸಂತೆ ವನ್ಯಜೀವಿ ವಲಯ ಪ್ರದೇಶದಲ್ಲಿ 2022 ರ ನವಂಬರ್ 12 ರಂದು ಜಮೀನಿನಲ್ಲಿ ಹೆಣ್ಣು ಹುಲಿಯೊಂದು ಉರುಳಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿತ್ತು. ಆಗ ಅದರ ಮೂರು ಮರಿಗಳು ಅನಾಥವಾಗಿದ್ದವು, ಬಳಿಕ ಮೂರು ಮರಿಗಳಲ್ಲಿ ಒಂದು ಮರಿ ಬೇರೆ ಹುಲಿಯ ದಾಳಿಯಿಂದ ಸಾವನ್ನಪ್ಪಿತ್ತು. ಮತ್ತೆರಡು ಹುಲಿಯ ಮರಿಗಳು ಏನಾಗಿದೆ ಎಂದು ಗೊತ್ತಾಗಲಿಲ್ಲ. ಈ ಘಟನೆ ಮಾಸುವ ಮುನ್ನವೇ ನಿನ್ನೆ ಹುಲಿ ಕಾದಾಟದಲ್ಲಿ ಗಾಯಗೊಂಡಿರುವ ನಾಲ್ಕು ಮರಿಗಳ ತಾಯಿ ಹುಲಿಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಒಂದು ವರ್ಷ ಪ್ರಾಯದ ನಾಲ್ಕು ಹುಲಿಮರಿಗಳ ಸ್ಥಿತಿಯ ಬಗ್ಗೆ ಅರಣ್ಯ ಇಲಾಖೆ ಯಾವ ರೀತಿ ಕ್ರಮ ವಹಿಸುತ್ತದೆ ಎಂಬುದು ವನ್ಯಜೀವಿ ಪ್ರಿಯರ ಪ್ರಶ್ನೆ ಆಗಿದೆ.
ಇದನ್ನೂ ಓದಿ: ಎರಡು ಪ್ರಾಣ ತೆಗೆದಿದ್ದ ಹುಲಿ ಕೊನೆಗೂ ಸೆರೆ: ನಿಟ್ಟುಸಿರು ಬಿಟ್ಟ ಕೊಡಗಿನ ಜನ