ಮೈಸೂರು: ಮೂಲತಃ ಮೈಸೂರು ನಿವಾಸಿಯಾದ ಬೆಂಗಳೂರಿನ ಬಿಎಂಟಿಸಿ ಡ್ರೈವರ್ ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ಆತನ ಸ್ವಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.
ಇಂದು ಮಾಸ್ಕ್ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾಸ್ಕ್ ಮಹತ್ವದ ಬಗ್ಗೆ ಮಾತನಾಡಿದ ಅವರು, ಮಾಸ್ಕ್ ಧರಿಸುವುದರಿಂದ ಸೋಂಕು ಹರಡದಂತೆ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು. ಅದಕ್ಕಾಗಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಪ್ರತಿದಿನ ಮೈಸೂರಿನಲ್ಲಿ 450 ರಿಂದ 500 ಕೊರೊನಾ ಟೆಸ್ಟ್ ನಡೆಯುತ್ತಿವೆ. ಕೊರೊನಾ ಸೋಂಕಿನ ಲಕ್ಷಣ ಇರುವರು ಕಡ್ಡಾಯವಾಗಿ ಸ್ವಂತ ಆಸಕ್ತಿಯಿಂದ ಬಂದು ಪರೀಕ್ಷೆಗೆ ಒಳಪಡಬೇಕು ಎಂದರು.
ಮಹಾರಾಷ್ಟ್ರದಿಂದ ಬಂದ 114 ಜನ ಸದ್ಯ ಕ್ವಾರಂಟೈನ್ ನಲ್ಲಿದ್ದಾರೆ. ಬೆಂಗಳೂರಿನ ಬಿಎಂಟಿಸಿ ಚಾಲಕನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ಆತನ ಸ್ವಗ್ರಾಮ ನಂಜನಗೂಡು ತಾಲ್ಲೂಕಿನ ಹಂಡುನಳ್ಳಿಯನ್ನು ಸೀಲ್ ಡೌನ್ ಮಾಡಲಾಗಿದೆ. ಹೀಗಾಗಿ ಯಾರೂ ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.