ಮೈಸೂರು: ಮದ್ಯದ ಅಮಲಿನಲ್ಲಿ ಸ್ಥಳೀಯರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಬೆಂಗಳೂರು ಮೂಲದ ಯವಕರಿಗೆ ಸ್ಥಳೀಯರು ಧರ್ಮದೇಟು ನೀಡಿ ಕಾರನ್ನು ಜಖಂಗೊಳಿಸಿರುವ ಘಟನೆ ಹೆಚ್.ಡಿ. ಕೋಟೆ ತಾಲೂಕಿನ ಚಿಕ್ಕದೇವಿರಮ್ಮ ಬೆಟ್ಟದ ತಪ್ಪಲಿನಲ್ಲಿರುವ ಹಾಲ್ಗಡದಲ್ಲಿ ನಡೆದಿದೆ.
ಹೆಚ್.ಡಿ. ಕೋಟೆ ತಾಲೂಕಿನ ಚಿಕ್ಕದೇವಿರಮ್ಮ ಬೆಟ್ಟದಲ್ಲಿ ಪೂಜೆಗೆ ಬೆಂಗಳೂರಿನಿಂದ ಕಾರಿನಲ್ಲಿ ಬಂದಿದ್ದ ಯುವಕರ ಗುಂಪು ಪೂಜೆ ಮುಗಿಸಿಕೊಂಡು ಬೆಟ್ಟದ ತಪ್ಪಲಿನಲ್ಲಿರುವ ಹಾಲ್ಗಡದಲ್ಲಿ ಮದ್ಯ ಸೇವಿಸಿ ಊಟ ಮಾಡಿದ್ದರು. ಈ ವೇಳೆ ಅಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸಿಟ್ಟಿಗೆದ್ದ ಜನರು ಯುವಕರು ತಂದಿದ್ದ ಕಾರನ್ನು ಜಖಂಗೊಳಿಸಿ ಧರ್ಮದೇಟು ನೀಡಿದ್ದಾರೆ.
ಈ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದ ಯುವಕನ ಮೊಬೈಲ್ ಕಿತ್ತುಕೊಂಡು ಆತನಿಗೂ ಸಹ ಧರ್ಮದೇಟು ನೀಡಿದ್ದಾರೆ. ಸ್ಥಳಕ್ಕೆ ಸರಗೂರು ಪೊಲೀಸರು ಆಗಮಿಸುತ್ತಿದ್ದಂತೆ ಯುವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ದೇವಿಗೆ ಬಲಿ ಕೊಟ್ಟ ಪ್ರಾಣಿಗಳನ್ನು ಇಲ್ಲಿ ತಂದು ಮಾಂಸದೂಟ ಮಾಡುತ್ತಾರೆ. ಈ ಸ್ಥಳದಲ್ಲಿ ಮದ್ಯದ ಮಾರಾಟ ಸಹ ಎಗ್ಗಿಲ್ಲದೆ ನಡೆಯುತ್ತಿದೆ. ಹೀಗಾಗಿ ಇಂತಹ ಗಲಾಟೆಗೆ ಕಾರಣವಾಗಿದೆ ಅನ್ನೋದು ಸ್ಥಳೀಯರ ಆರೋಪವಾಗಿದೆ.