ಮೈಸೂರು: ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡುವುದರಿಂದ ತಮಗೆ ಮತ ಬರುತ್ತದೆ ಎಂದುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಅದು ಮತವಾಗಿ ಪರಿವರ್ತನೆಯಾಗುವುದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಅವರು ಕಾಂಗ್ರೆಸ್ ಹಾಗೂ ಬಿಜೆಪಿಯ ವಿರುದ್ಧ ಹರಿಹಾಯ್ದರು.
ಮಾನಸ ಗಂಗೋತ್ರಿಯ ರಾಣಿ ಬಹುದ್ದೂರ್ ಸಭಾಂಗಣದಲ್ಲಿ ಮಾಧ್ಯಮಗಳಿಗೆ ಎಸ್ಸಿ ಎಸ್ಟಿ ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಎರಡು ವರ್ಷದ ಹಿಂದೆಯೇ ವರದಿ ಕೊಟ್ಟಿದ್ದರು. ಈಗ ಅದನ್ನ ಅನುಷ್ಠಾನ ಮಾಡುತ್ತಿದ್ದಾರೆ. ಅದರ ಅರ್ಥ ಏನು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.
ರಾಜಕೀಯ ಮುಖಂಡರುಗಳೇ ತಮಗಾಗಿ ತಮ್ಮ ಅನುಕೂಲಕ್ಕಾಗಿ ಮೀಸಲಾತಿ ಹೋರಾಟವನ್ನ ಹುಟ್ಟು ಹಾಕಿದ್ದಾರೆ. ಮುಂದೊಂದು ದಿನ ಅವರಿಗೆ ತಿರುಗು ಬಾಣ ಆಗುತ್ತದೆ. ಸರ್ಕಾರ ಜೇನುಗೂಡಿಗೆ ಕಲ್ಲು ಎಸೆಯುವ ಕೆಲಸ ಮಾಡುತ್ತಿದೆ ಎಂದು ಎಚ್ಚರಿಕೆ ನೀಡಿದರು. ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾವಣೆ ವಿಚಾರ ಮಾತನಾಡಿ, ಹೆಸರು ಬದಲಾವಣೆ ಮೂಲಕ ಭಾವನಾತ್ಮಕವಾಗಿ ಜನರನ್ನ ಸೆಳೆಯುವ ತಂತ್ರವಿದು.
ಹೆಸರು ಬದಲಾವಣೆ ಮಾಡಿದ ಕೂಡಲೇ ಜನರ ಜೀವನ ಬದಲಾವಣೆ ಆಗುವುದಿಲ್ಲ. ಆಯಾ ಕಾಲಕ್ಕೆ ಈ ರೀತಿ ಬದಲಾವಣೆಗಳು ನಡೆಯುತ್ತಲೇ ಇರುತ್ತದೆ. ಇದು ಕೂಡ ವೋಟ್ ಬ್ಯಾಂಕ್‌ನ ಭಾಗ ಎಂದರು.
ಕೇಂದ್ರೀಯಾ ಪರೀಕ್ಷೆಗಳಲ್ಲಿ ಹಿಂದಿ ಇಂಗ್ಲೀಷ್ಗೆ ಮಾತ್ರ ಅವಕಾಶ ವಿಚಾರವಾಗಿ ಮಾತನಾಡಿ, ಇದು ಕನ್ನಡಿಗರಿಗೆ ಮಾತ್ರ ಅಲ್ಲ, ಎಲ್ಲ ಭಾಷಿಕರಿಗೆ ಆಗಿರುವ ಅನ್ಯಾಯ. ಇದು ವ್ಯವಸ್ಥಿತವಾಗಿ ಹಿಂದಿಯನ್ನು ಹೇರುವ ಪ್ರಕ್ರಿಯೆ, ಡಿಟಿಎಚ್ಗಳಲ್ಲೂ ಈಗ ಇಂಗ್ಲೀಷ್ ಜೊತೆ ಹಿಂದಿ ಬರುತ್ತಿದೆ. ಇದು ಪ್ರಾದೇಶಿಕ ಭಾಷೆಗಳಿಗೆ ಅಪಾಯಕಾರಿ. ಕೇಂದ್ರ ಸರ್ಕಾರದ ಈ ನಿಲುವು ಖಂಡನೀಯ ಎಂದು ಹೇಳಿದರು.
ಇದನ್ನೂ ಓದಿ: ಟಿಪ್ಪುವಿನ ಹೆಸರೇ ಗೊಂದಲದಲ್ಲಿದೆ ಅವನ ಸಾಧನೆಗಳೂ ಚರ್ಚೆಯಲ್ಲಿವೆ ಅಂತಹ ಹೆಸರು ಬಳಕೆಗೆ ಸೂಕ್ತವಲ್ಲ: ಕಟೀಲ್