ಮೈಸೂರು : ಅಂಬೇಡ್ಕರ್ ಜಯಂತಿ, ಗುಡ್ ಫ್ರೈಡೇ, ಶನಿವಾರ ಮತ್ತು ಭಾನುವಾರದ ವೀಕೆಂಡ್ ರಜೆಗಳಿರುವುದರಿಂದ ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆ ಎಲ್ಲಾ ಕ್ಷೇತ್ರಗಳು, ವ್ಯಾಪಾರ, ವಹಿವಾಟುಗಳು ನೆಲಕಚ್ಚಿದ್ದವು. ಇದರಿಂದ ಪ್ರವಾಸೋದ್ಯಮವು ಹೊರತಲ್ಲ. ಇದೀಗ ಮೈಸೂರು ಪ್ರವಾಸೋದ್ಯಮದಲ್ಲಿ ಚೇತರಿಕೆ ಕಾಣುತ್ತಿದೆ.
ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ, 15 ಗುಡ್ ಫ್ರೈಡೇ ಹಾಗೂ ಶನಿವಾರ ಭಾನುವಾರ ವೀಕೆಂಡ್ ರಜೆ ಇರುವುದರಿಂದ ಹಾಗೂ ಎಸ್‌ಎಸ್‌ಎಲ್ಸಿ ಮಕ್ಕಳಿಗೆ ಹಾಗೂ ಶಾಲಾ ಮಕ್ಕಳಿಗೆ ಸ್ಕೂಲ್ ರಜೆ ಇರುವುದರಿಂದ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಳವಾಗಿದೆ. ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ, ಕೆಆರ್‌ಎಸ್, ಜಗನ್ಮೋಹನ ಅರಮನೆ, ರಂಗನತಿಟ್ಟು ಪಕ್ಷಿಧಾಮ, ಕಾರಂಜಿ ಕೆರೆ, ನಂಜನಗೂಡು ಸೇರಿದಂತೆ ವಿವಿಧ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿವೆ.
ಇದನ್ನೂ ಓದಿ: ಬೆಂಗಳೂರಿನತ್ತ ಈಶ್ವರಪ್ಪ ಪಯಣ: ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತರ ಕಣ್ಣೀರು
ಬೇರೆ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಿರುವುದರಿಂದ ಮೈಸೂರು ನಗರದ ಮಧ್ಯೆ ಭಾಗದಲ್ಲಿರುವ ಎಲ್ಲಾ ಹೋಟೆಲ್ಗಳು ಭರ್ತಿಯಾಗಿವೆ. ನಗರದ ಹೊರವಲದ ರಿಂಗ್ ರಸ್ತೆಯ ಆಜು ಬಾಜುಗಳಲ್ಲಿರುವ ಮತ್ತು ವಿವಿಧ ಬಡಾವಣೆಗಳಲ್ಲಿರುವ ಹೋಟೆಲ್ ರೂಮ್‌ಗಳು ಶೇ.90% ರಷ್ಟು ಭರ್ತಿಯಾಗಿವೆ. ವ್ಯಾಪಾರ, ವಹಿವಾಟು ಚೆನ್ನಾಗಿ ನಡೆಯುತ್ತಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ತಿಳಿಸಿದ್ದಾರೆ.