ಮೈಸೂರು: ಕೋವಿಡ್ ಕಾರಣದಿಂದ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ಆದರೆ, ಮಾರ್ಚ್ ತಿಂಗಳಲ್ಲಿ ಮತ್ತೆ ವಿಮಾನಯಾನಕ್ಕೆ ಬೇಡಿಕೆ ಹೆಚ್ಚಾಗಿದೆ. ಪರಿಣಾಮ, ವಿಮಾನಗಳು ಭರ್ತಿಯಾಗಿ ಹಾರಾಟ ನಡೆಸುತ್ತಿದೆ.
ಇಲ್ಲಿನ ವಿಮಾನ ನಿಲ್ದಾಣದಿಂದ ಸುತ್ತಮುತ್ತಲಿನ ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ, ಹೈದರಾಬಾದ್, ಗೋವಾ ನಗರಗಳಿಗೆ ನೇರ ಸಂಪರ್ಕ ಇದೆ. ಕೋವಿಡ್ ನಂತರ ಪ್ರಯಾಣಿಸುವವರ ಸಂಖ್ಯೆ ಬಹಳ ಕಡಿಮೆಯಾಗಿದ್ದು ಮಂಗಳೂರು ಹಾಗೂ ಬೆಳಗಾವಿ ಮಾರ್ಗದ ವಿಮಾನ ಹಾರಾಟ ನಿಲ್ಲಿಸಲಾಗಿತ್ತು.
ಇದೀಗ ಪ್ರಯಾಣಿಕರ ಸಂಖ್ಯೆ ಸಹಜವಾಗಿದೆ. ಮಾರ್ಚ್ ತಿಂಗಳಿನಲ್ಲಿ 14,600 ಪ್ರಯಾಣಿಕರು ವಿಮಾನಯಾನ ಮಾಡಿದ್ದಾರೆ. ಹುಬ್ಬಳ್ಳಿಗೆ ವಾರಕ್ಕೆ ಮೂರು ದಿನ ವಿಮಾನ ಹಾರಾಟ ಆರಂಭಿಸಲಾಗಿದೆ. ಬೇಡಿಕೆಯನ್ನು ಗಮನಿಸಿಕೊಂಡು ಹಾರಾಟ ಹೆಚ್ಚಿಸಲಾಗುತ್ತದೆ ಎಂದು ಮೈಸೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಆರ್.ಮಂಜುನಾಥ್ ತಿಳಿಸಿದರು.
ಪ್ರಮುಖ ನಗರಗಳು ಮತ್ತು ಪ್ರವಾಸಿತಾಣಗಳಾದ ಗೋವಾ, ಚೆನ್ನೈ ಹಾಗೂ ಹೈದರಾಬಾದ್‌ಗೆ ಸಂಚರಿಸುವ ವಿಮಾನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ಮಾರ್ಗದಲ್ಲಿ ಒಂದು ತಿಂಗಳ ಟಿಕೆಟ್ಗಳು ಮುಂಗಡವಾಗಿ ಕಾಯ್ದಿರಿಸಲ್ಪಟ್ಟಿವೆ. ದಿನಕ್ಕೆ 12 ಮಾರ್ಗದಲ್ಲಿಯೂ ಶೇ.100ರಷ್ಟು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಪ್ರವಾಸಿ ತಾಣಗಳಿಗೆ ಹೋಗುವವರು ಹಾಗೂ ಅಲ್ಲಿಂದ ಬರುವವರ ಸಂಖ್ಯೆಯು ಹೆಚ್ಚಿನ ಪ್ರಮಾಣದಲ್ಲಿದೆ. ವಿದೇಶಿಯರ ಸಂಚಾರ ಸಹ ಹೆಚ್ಚಳವಾಗಿದೆ.
ಪ್ರತಿದಿನ 6 ಮಾರ್ಗಗಳಲ್ಲಿ ವಿಮಾನ ಹಾರಾಟ ನಡೆಯುತ್ತಿದ್ದು, 12 ಟ್ರಿಪ್ಗಳು ಸಂಚರಿಸುತ್ತವೆ. ವಿಮಾನ ಸಂಚಾರವನ್ನು ಹೆಚ್ಚಿಸುವಂತೆ ಬೇಡಿಕೆ ಸಹ ಇದೆ. ಇದರ ಬಗ್ಗೆ ವಿಮಾನಯಾನ ಸಂಸ್ಥೆಗಳ ಜೊತೆಗೆ ವಿಮಾನ ನಿಲ್ದಾಣ ಪ್ರಾಧಿಕಾರ ಮಾತುಕತೆ ನಡೆಸುತ್ತಿವೆ. ಆದರೆ, ಮೈಸೂರು ವಿಮಾನ ನಿಲ್ದಾಣದ ರನ್ ವೇ 1740 ಮೀಟರ್ ಇರುವುದರಿಂದ ಕೇವಲ ಚಿಕ್ಕ ವಿಮಾನಗಳು ಮಾತ್ರ ಬಂದಿಳಿಯಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಪಾರಂಪರಿಕ ದೇವರಾಜ ಮಾರುಕಟ್ಟೆ ನೆಲಸಮ ಮಾಡುವುದು ಸಮಂಜಸವಲ್ಲ: ಪ್ರಮೋದಾ ದೇವಿ ಒಡೆಯರ್