ಮೈಸೂರು: ಸರಕು ಸಾಗಣೆಯನ್ನು ಹೆಚ್ಚಿಸಲು ಮೈಸೂರು ವಿಭಾಗದಿಂದ ವ್ಯಾಪಾರ ಅಭಿವೃದ್ಧಿ ಘಟಕವನ್ನು ಸ್ಥಾಪಿಸಲಾಗಿದೆ. ಸರಕು ಸಾಗಣೆಗೆ ಹೆಚ್ಚಿನ ಒತ್ತು ನೀಡಲು ಮತ್ತು ವ್ಯಾಪಾರ ಮಾಡಲು ಸುಲಭವಾಗುವಂತೆ, ಮೈಸೂರು ರೈಲ್ವೆ ವಿಭಾಗವು ವ್ಯವಹಾರ ಅಭಿವೃದ್ಧಿ ಘಟಕವನ್ನು (ಬಿಡಿಯು) ಸ್ಥಾಪಿಸಿದೆ.
ರೈಲ್ವೆ ಸಚಿವಾಲಯದ (ರೈಲ್ವೆ ಮಂಡಳಿ) ನಿರ್ದೇಶನದ ಅನುಸಾರ ಜುಲೈ 2 ರಂದು ಇದನ್ನು ಸ್ಥಾಪಿಸಲಾಗಿದೆ. ಈ ಬಹು ವಿಭಾಗಗಳ ಘಟಕದ ಧ್ಯೇಯವು ಭಾರತೀಯ ರೈಲ್ವೆ ಸಾಗಿಸುವ ಸರಕುಗಳನ್ನು ದ್ವಿಗುಣಗೊಳಿಸುವುದು. ಹಿರಿಯ ವಿಭಾಗೀಯ ಕಾರ್ಯಾಚರಣಾ ವ್ಯವಸ್ಥಾಪಕ ವಿ. ಸತೀಶ್ ಘಟಕದ ಮುಖ್ಯಸ್ಥರಾಗಿರುತ್ತಾರೆ.
ಈ ಘಟಕವು ವಾಣಿಜ್ಯ, ಯಾಂತ್ರಿಕ ಮತ್ತು ವಿತ್ತ ಖಾತೆ ವಿಭಾಗಗಳ ಅಧಿಕಾರಿಗಳನ್ನು ಸದಸ್ಯರನ್ನಾಗಿ ಹೊಂದಿದೆ. ಈ ಸಮಿತಿಯು ನಿಗದಿತ ಗುರಿಯನ್ನು ಸಾಧಿಸಲು ಅಸ್ತಿತ್ವದಲ್ಲಿರುವ ಗ್ರಾಹಕರೊಂದಿಗೆ ಸಂವಹನ ನಡೆಸಲು ಮತ್ತು ಹೊಸ ಗ್ರಾಹಕರನ್ನು ತಲುಪಲು ನೋಡಲ್ ಪಾಯಿಂಟ್ (ಸಂಪರ್ಕ ಬಿಂದು)ವಾಗಿ ಕಾರ್ಯನಿರ್ವಹಿಸುತ್ತದೆ. ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಪ್ರಧಾನ ಕಚೇರಿಯಲ್ಲಿ ಪ್ರಧಾನ ಸರಕು ಸಾಗಣೆ ವ್ಯವಸ್ಥಾಪಕರು ಇದರ ಉಸ್ತುವಾರಿ ವಹಿಸಲಿದ್ದಾರೆ.
ವಿಭಾಗದ ಪ್ರಮುಖ ಸರಕು ಸಾಗಣೆ ಗ್ರಾಹಕರು, ಅಂದರೆ, ಜೆ.ಎಸ್. ಡಬ್ಲ್ಯೂ., ತೋರಣಗಲ್ಲು (ಕಬ್ಬಿಣ ಮತ್ತು ಉಕ್ಕಿನ ವಲಯ) ಆರ್.ಪ್ರವೀಣ್ ಚಂದ್ರ ಕಂ. ಮತ್ತು ವೇದಾಂತ ಲಿಮಿಟೆಡ್ (ಕಬ್ಬಿಣ ಅದಿರು ವಲಯ), ಹೈಡೆಲ್ಬರ್ಗ್ ಸಿಮೆಂಟ್ (ಸಿಮೆಂಟ್ ವಲಯ) ಮತ್ತು ಗುಜರಾತ್ ಅಂಬುಜಾ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ (ಕೃಷಿ ವಲಯ) ಸಭೆಯಲ್ಲಿ ಭಾಗವಹಿಸಿದ್ದವು. ಕಲ್ಲಿದ್ದಲು, ಸಿಮೆಂಟ್, ರಸಗೊಬ್ಬರಗಳು ಮತ್ತು ಆಹಾರ ಧಾನ್ಯಗಳು - ಈ ಪ್ರಮುಖ ವಲಯಗಳ ವಸ್ತುಗಳ ಚಲನೆಯು ಜೂನ್‌ನಲ್ಲಿ ಕಂಡುಬಂದ ಬೆಳವಣಿಗೆಗೆ ಪ್ರಮುಖ ಕಾರಣಿಕರ್ತರು ಎಂದು ಬಿಡಿಯು ಸಂಚಾಲಕರು ವಿವರಿಸಿದರು. ಸಾಮಾನ್ಯ ಲೋಡಿಂಗ್ ಮಾದರಿಗೆ ಸ್ಥಿತಿ ಸಿದ್ಧವಾಗುತ್ತಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಕಳೆದ ವರ್ಷ ಮೈಸೂರು ವಿಭಾಗವು ಗುರಿಯನ್ನು ಮೀರಿ ಸಾರ್ವಕಾಲಿಕ ಹೆಚ್ಚಿನ ಲೋಡಿಂಗ್ ದಾಖಲೆ ಸಾಧಿಸಿತ್ತು.
ಕಳೆದ ಒಂದು ತಿಂಗಳಲ್ಲಿನ ಸರಾಸರಿ 25 ಕಿಲೋಮೀಟರ್ ವೇಗದಿಂದ 45 ಕಿಲೋಮೀಟರ್ ವೇಗವನ್ನು ತಲುಪಿದೆ. ‘ಸುರಕ್ಷತೆ ಮೊದಲ ಆದ್ಯತೆ’ ಎಂಬ ಧ್ಯೇಯದೊಂದಿಗೆ ಎಲ್ಲಾ ಸರಕು ರೈಲುಗಳನ್ನು ಸರಾಸರಿ 50 ಕಿಲೋಮೀಟರ್ ವೇಗದಲ್ಲಿ ಓಡಿಸುವುದು ರೈಲ್ವೆಯ ಗುರಿಯಾಗಿದೆ. ಸರಕು ಸಾಗಣೆಯನ್ನು ರಸ್ತೆ ಮಾರ್ಗದಿಂದ ರೈಲ್ವೆ ಮಾರ್ಗಕ್ಕೆ ಬದಲಾಯಿಸಲು ಅನುವು ಮಾಡಿಕೊಡುವ ವಾತಾವರಣವನ್ನು ರೈಲ್ವೆಯು ಸೃಷ್ಟಿಸುತ್ತಿದೆ.
ಕಳೆದ ಆರ್ಥಿಕ ವರ್ಷದ ಹೋಲಿಕೆಯಲ್ಲಿ ಈ ಸಲದ ಕಡಿಮೆ ಬೇಡಿಕೆಯು ತಮ್ಮ ಲೋಡಿಂಗ್ ಮೇಲೆ ಪರಿಣಾಮ ಬೀರಬಹುದು ಎಂದು ಕಬ್ಬಿಣದ ಅದಿರಿನ ಗ್ರಾಹಕರು ಹೇಳಿದ್ದಾರೆ. ಮೈಸೂರು ವಿಭಾಗದ ಸಾಸಲುಗೆ ಹೋಲಿಸಿದರೆ, ಒಡಿಶಾ ಮತ್ತು ಜಾರ್ಖಂಡ್‌ನಲ್ಲಿನ ಉನ್ನತ ದರ್ಜೆಯ ಅದಿರಿನ ಲಭ್ಯತೆ ಮತ್ತು ವೈಜಾಗ್‌ನ ಸಾಮೀಪ್ಯ, ಪ್ರಶಸ್ತ ಪರ್ಯಾಯವಾಗಿರುವುದರ ಬಗ್ಗೆ ಅವರು ಗಮನಸೆಳೆದರು. ಲೋಡ್ ಮಾಡಲು ಸಮರ್ಪಕ ವ್ಯಾಗನ್‌ಗಳನ್ನು ನೀಡುವುದು, ಡೆಮುರೇಜ್ ಶುಲ್ಕ ವಿಧಿಸುವುದನ್ನು ಕಡಿತಗೊಳಿಸುವುದು, ಲೋಡಿಂಗ್ ಪಾಯಿಂಟ್‌ಗಳಲ್ಲಿ ಉತ್ತಮ ಪರಿಸ್ಥಿತಿ ನಿರ್ಮಾಣ, ಸ್ಪರ್ಧಾತ್ಮಕ ದರಗಳು, ಹೊಸದಾಗಿ ಮಾರ್ಪಡಿಸಿದ ಸರಕು ವ್ಯಾಗನ್‌ಗಳ ಪೂರೈಕೆ ಇತ್ಯಾದಿ ಸೇರಿದಂತೆ ಕೆಲವು ವಿಷಯಗಳನ್ನು ಪರಿಹರಿಸಬೇಕಾಗಿದೆ.
ಸಣ್ಣ ಉದ್ರೇಕಕಾರಿ ಅಂಶಗಳನ್ನು ಸಹ ತೆಗೆದುಹಾಕಲು ಮತ್ತು ಎಲ್ಲಾ ಲೋಡಿಂಗ್ ಪಾಯಿಂಟ್‌ಗಳಲ್ಲಿ ಅತ್ಯಂತ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ರೈಲ್ವೆಯು ಹೇಳಿದೆ.