ಮೈಸೂರು: ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರ, ಆರ್ಎಸ್ಎಸ್ ಸರ್ಕಾರ ಅಲ್ಲ. ಮಸೀದಿಗಳಲ್ಲಿ ಶಿವಲಿಂಗ ಹುಡುಕುವುದನ್ನ ಬಿಡಿ, ಮುಸ್ಲಿಮರು ನಮ್ಮವರೇ ಅಂತಾ ಸ್ಪಷ್ಟವಾಗಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಇವರ ಹೇಳಿಕೆಯನ್ನ ಸ್ವಾಗತಿಸುತ್ತೇನೆ. ಈ ಮೂಲಕ ದೇಶದ, ರಾಜ್ಯದ ಆರ್ಎಸ್ಎಸ್ ಕಾರ್ಯಕರ್ತರಿಗೆ ತಿಳುವಳಿಕೆ ನೀಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ಭಾರತದ ಮುಸ್ಲಿಮರು ನಮ್ಮ ಅಣ್ಣ- ತಮ್ಮಂದಿರು ಎಂದಿದ್ದಾರೆ. ಹಲವಾರು ಪ್ರಕ್ಷುಬ್ಧತೆ, ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ಭಾಗವತ್ ಹೇಳಿದ ಮೇಲೆ ನಮ್ಮ ರಾಜ್ಯದ ಯಾವೊಬ್ಬ ಆರ್ಎಸ್ಎಸ್ ಕಟ್ಟಾಳುಗಳು ತುಟಿಬಿಚ್ಚಿಲ್ಲ. ಸಂಸದರಾದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ, ಶಾಸಕ ಯತ್ನಾಳ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜೀ ಅವರ್ಯಾರು ಮಾತನಾಡುತ್ತಿಲ್ಲ. ಮೋಹನ್ ಭಾಗವತ್ ಹೇಳಿಕೆಯನ್ನು ಸ್ವಾಗತಿಸಿಲ್ಲ. ಭಾಗವತ್ ಹೇಳಿದ ಮೇಲೂ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದೀರಾ ಎಂದು ವಿಶ್ವನಾಥ್ ಕಿಡಿಕಾರಿದರು.
ಆರ್ಎಸ್ಎಸ್ ಮುಖಂಡರ ವಿರುದ್ಧ ವಿಶ್ವನಾಥ್ ಆಕ್ರೋಶ: ಭಾಗವತ್ ಹೇಳಿಕೆಗೆ ಗೌರವ ಇಲ್ವಾ? ಎಲ್ಲಿದ್ಯಪ್ಪ ಪ್ರತಾಪ್ ಸಿಂಹ? ಕರ್ನಾಟಕದ ಬೆಳವಣಿಗೆಗಳಿಂದ ವಿದೇಶಗಳೂ ಭಾರತಕ್ಕೆ ಪಾಠ ಮಾಡುವ ಸ್ಥಿತಿ ಬಂದಿದೆ ಎಂದು ಅಸಮಾಧಾನ ಹೊರಹಾಕಿದರು. ಇದು ಬಿಜೆಪಿ ಸರ್ಕಾರ, ಆರ್ಎಸ್ಎಸ್ ಸರ್ಕಾರ ಅಲ್ಲ. ನಾವು ಬೆಂಬಲ ಕೊಟ್ಟಿದ್ದು ಬಿಜೆಪಿಗೆ ಹೊರತು ಆರ್ಎಸ್ಎಸ್ಗೆ ಅಲ್ಲ. ರಾಜ್ಯದ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕ್ತೀದ್ದೀರ. ನಾಚಿಕೆ ಅಗೋದಿಲ್ವಾ ಎಂದು ರಾಜ್ಯದ ಆರ್ಎಸ್ಎಸ್ ಮುಖಂಡರ ವಿರುದ್ಧ ಹೆಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ಶಾಂತಿಯನ್ನ ಮಸೀದಿಯಲ್ಲಿ ಶಿವಲಿಂಗ ಹುಡುಕುವ ಮೂಲಕ ಕದಡಲಾಗುತ್ತಿದೆ. ಬಿಜೆಪಿ ವಕ್ತಾರರು ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದಾರೆ. ನಾಯಕರು ಇದಕ್ಕೆ ಕಡಿವಾಣ ಹಾಕಬೇಕು. ಆರ್ಎಸ್ಎಸ್ ನಾಯಕರು ಮಾಧ್ಯಮಗೋಷ್ಟಿ ಮೂಲಕ ಮಸೀದಿಯಲ್ಲಿ ಶಿವಲಿಂಗ ಹುಡುಕುವುದನ್ನ ನಿಲ್ಲಿಸಿ ಅಂತಾ ಹೇಳಿ ಎಂದು ಕಿಡಿಕಾರಿದರು.
ಇದನ್ನೂ ಓದಿ: ಮಸೀದಿ, ಮಂದಿರಗಳಲ್ಲಿ ಮೈಕ್ ಬಳಸಲು ಅನುಮತಿ ಕಡ್ಡಾಯ: ಬಳ್ಳಾರಿ ಎಸ್ಪಿ
ಆರ್ಎಸ್ಎಸ್ ಕಚೇರಿ ಎಲೆಕ್ಟೆಡ್ ಬಾಡಿನಾ?: ಮುಸ್ಲಿಂ ರಾಷ್ಟ್ರಗಳಲ್ಲಿ 25 ಲಕ್ಷ ಕುಟುಂಬಗಳು ಬದುಕುತ್ತಿವೆ. ಹೆಚ್ಚು ಕಡಿಮೆ ಆದ್ರೆ ಅವ್ರು ಬರೋದಿಕ್ಕೆ ಆಗುತ್ತಾ ಎಂದು ಪ್ರಶ್ನಿಸಿದರು. ಪಠ್ಯ ಪುಸ್ತಕ ಪರಿಷ್ಕರಣೆಯನ್ನ ಆರ್ಎಸ್ಎಸ್ ಕಚೇರಿಗೆ ಒಪ್ಪಿಸುವುದಲ್ಲ. ವಿರೋಧ ಪಕ್ಷದವರು, ಜನರು, ಶಿಕ್ಷಣ ತಜ್ಞರ ಮುಂದೆ ಒಪ್ಪಿಸಿ ಎಂದು ಶಿಕ್ಷಣ ಸಚಿವ ನಾಗೇಶ್ ವಿರುದ್ಧ ಗರಂ ಆದರು. ರಾಜ್ಯದ ಜನಕ್ಕೆ, ಪೋಷಕರಿಗೆ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕುಮಾರಸ್ವಾಮಿಗೆ ಒಪ್ಪಿಸಿ. ಆರ್ಎಸ್ಎಸ್ ಕಚೇರಿ ಎಲೆಕ್ಟೆಡ್ ಬಾಡಿನಾ ಎಂದು ಪ್ರಶ್ನಿಸಿದರು.
ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ: ಸಿದ್ದರಾಮಯ್ಯ ಅವರ ಲಾಯರ್ ಗಿರಿ ಬಗ್ಗೆ ಸಂಸದ ಪ್ರತಾಪಸಿಂಹ ಹಗುರವಾಗಿ ಮಾತನಾಡಬಾರದಿತ್ತು. ಮೈಸೂರಿಗೆ ಮಹಾರಾಜರು ಬಿಟ್ಟರೆ, ನಾನೇ ಹೆಚ್ಚು ಕೆಲಸ ಮಾಡಿದ್ದು ಅಂತ ಹೇಳಿಕೊಳ್ತಾನೆ. ಎಂಟು ವರ್ಷದಲ್ಲಿ ಮೈಸೂರಿಗೆ ಈತ ಏನೂ ಕೊಟ್ಟಿಲ್ಲ ಎಂದು ಕಿಡಿಕಾರಿದರು. ನಾನು ಕಾಂಗ್ರೆಸ್ ನಿಂದ ಲೋಕಸಭೆಗೆ ಸ್ಪರ್ಧಿಸಿದಾಗ, ಸಿದ್ದರಾಮಯ್ಯ ಆಗ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ನಾನು ಗೆಲ್ಲುತ್ತಿದ್ದೆ ಎಂದರು.