ಮೈಸೂರು: ನಿವೃತ್ತ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿ ಬಂಧನ ಮಾಡಲಾಗಿದೆ. ಹಲವರ ವಿಚಾರಣೆ ನಡೆಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಕಮಿಷನರ್ ಡಾ ಚಂದ್ರಗುಪ್ತ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನವೆಂಬರ್ 04 ರಂದು ಮಾನಸ ಗಂಗೋತ್ರಿ ಕ್ಯಾಂಪಸ್ನಲ್ಲಿ ಸಂಜೆ ವಾಕ್ ಮಾಡುತ್ತಿದ್ದಾಗ ನಾಮಫಲಕವಿಲ್ಲದ ಕಾರೊಂದು ನಿವೃತ್ತ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿ ಆರ್.ಎಸ್ ಕುಲಕರ್ಣಿ (83 ವರ್ಷ) ಅವರಿಗೆ ಗುದ್ದಿದೆ. ಅವರನ್ನು ಅಪಘಾತದ ರೀತಿಯಲ್ಲಿ ಕೊಲೆ ಮಾಡಲಾಗಿದ್ದು, ಈ ಬಗ್ಗೆ ವಿಶೇಷ ತನಿಖಾ ದಳವನ್ನು ರಚಿಸಲಾಗಿತ್ತು.
ಒಬ್ಬ ಆರೋಪಿ ಬಂಧನ: ಈ ಪ್ರಕರಣದಲ್ಲಿ ಕೊಲೆಯಾದ ನಿವೃತ್ತ ಅಧಿಕಾರಿಯ ಮನೆಯ ಪಕ್ಕ, ಹೊಸ ಮನೆ ನಿರ್ಮಾಣ ಮಾಡುತ್ತಿದ್ದ ಮಾದಪ್ಪ ಎಂಬ ವ್ಯಕ್ತಿ ನಡುವೆ ಗಲಾಟೆಯಾಗಿತ್ತು. ಈ ಸಂಬಂಧ ಕೊಲೆಯಾದ ಕುಲಕರ್ಣಿ ಅವರು ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಹಲವರಿಗೆ ಪಕ್ಕದ ಮನೆಯವರು ಕಾನೂನು ಉಲ್ಲಂಘಿಸಿ ಅಕ್ರಮ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಅಲ್ಲದೇ ನ್ಯಾಯಾಲಯದಲ್ಲೂ ಪ್ರಕರಣ ಸಹ ದಾಖಲಿಸಿದ್ದರು.
ಈ ಸಂಬಂಧ ಪಕ್ಕದ ಮನೆಯವರು ನಿವೃತ್ತ ಐಬಿ ಅಧಿಕಾರಿಗೆ ತೊಂದರೆ ನೀಡುತ್ತಿದ್ದರು. ಇದರಿಂದ ಮಾದಪ್ಪನ ಮಗ ಮನು (30 ವರ್ಷ) ಕುಲಕರ್ಣಿಯ ಕೊಲೆಗಾಗಿ ಕಾರು ಖರೀದಿಸಿದ್ದ. ಪ್ರತಿದಿನ ವಾಕಿಂಗ್ ಮಾಡುತ್ತಿದ್ದ ಸ್ಥಳವನ್ನು ಸ್ನೇಹಿತ ವರುಣ್ ಜೊತೆ ಸೇರಿ ಸ್ಥಳ ನೋಡಿಕೊಂಡು ಬಂದಿದ್ದ. ಶುಕ್ರವಾರ ಸಂಜೆ ಕಾರಿನ ನಂಬರ್ ಪ್ಲೇಟ್ ತೆಗೆದು ವಾಕಿಂಗ್ ಮಾಡುತ್ತಿದ್ದ, ಕುಲಕರ್ಣಿಗೆ ಗುದ್ದಿ ಸಾಯಿಸಿದ್ದಾನೆ ಎಂದು ಕಮಿಷನರ್ ಹೇಳಿದ್ದಾರೆ.
ಇದನ್ನೂ ಓದಿ: ನಿವೃತ್ತ ಐಬಿ ಅಧಿಕಾರಿ ಕೊಲೆ ಪ್ರಕರಣ: ಪಕ್ಕದ ಮನೆಯವರ ವಿರುದ್ಧ ಅಳಿಯನಿಂದ ದೂರು
ಮನು ಎಂಬಾತ ಎಂಬಿಎ ಪದವೀಧರನಾಗಿದ್ದು ಪೊಲೀಸರು ಬಂಧಿಸಿದ್ದಾರೆ. ಆತನಿಗೆ ಸಹಾಯ ಮಾಡಿದ್ದ ವರುಣ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕಾರು ಮಾಲೀಕ ರಘು ಎಂಬುವವನನ್ನು ಸಹ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪ್ರಕರಣದಲ್ಲಿ ಒಬ್ಬನನ್ನು ಮಾತ್ರ ಬಂಧನ ಮಾಡಲಾಗಿದ್ದು, ಹಲವರ ವಿಚಾರಣೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಮಾಹಿತಿ ನೀಡಿದರು.
(ಓದಿ: ಮಾನಸ ಗಂಗೋತ್ರಿ ಆವರಣದಲ್ಲಿ ಕಾರು ಡಿಕ್ಕಿ ಹೊಡೆಸಿ ನಿವೃತ್ತ ಇಂಟೆಲಿಜೆನ್ಸ್ ಅಧಿಕಾರಿ ಕೊಲೆ)