ಮೈಸೂರು : ಕೇಂದ್ರದಲ್ಲಿ ಮಂತ್ರಿಸ್ಥಾನ ನಾನೇ ಬೇಡ ಎಂದಿದ್ದೇನೆ. ಈ ಹಿಂದೆ ಚುನಾವಣೆಯನ್ನೇ ಬೇಡ ಎಂದಿದ್ದವನು ನಾನು, ಇನ್ನು ಮಂತ್ರಿಪಟ್ಟ ಯಾಕೇ ನನಗೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಸುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಳೆ ಮೈಸೂರು ಭಾಗಕ್ಕೆ ಈಗ ಸಾಕಾಗುವಷ್ಟು ಮಂತ್ರಿ ಸ್ಥಾನ ಇದೆ. ಸಿಎಂ ಹಳೆ ಮೈಸೂರು ಭಾಗದವರೇ.. ಈಶ್ವರಪ್ಪ, ನಾರಾಯಣಗೌಡ, ಎಸ್.ಟಿ.ಸೋಮಶೇಖರ್ ಹಳೆ ಮೈಸೂರಿನವರೇ.. ಇನ್ನೆಷ್ಟು ಜನರನ್ನ ರಾಶಿ ಹಾಕಿಕೊಳ್ತೀರಾ ಹೇಳಿ ಎಂದು ಪ್ರಶ್ನಿಸಿದರು. ಅಳಿಯ ಶಾಸಕ ಹರ್ಷವರ್ಧನ್ ಮಂತ್ರಿಸ್ಥಾನ ಬೇಡಿಕೆ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅದು ಅವರ ವೈಯುಕ್ತಿಕ ಹೇಳಿಕೆ ಎಂದರು.
ಧ್ರುವ ನಾರಾಯಣ ಉಗುರಿಗೆ ಸಮನಲ್ಲ : ಸಂಸದರಾಗಿ ಶ್ರೀನಿವಾಸ್ ಪ್ರಸಾದ ಸಾಧನೆ ಏನು ಎಂಬ ಧ್ರುವನಾರಾಯಣ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವನು ನನ್ನ ಉಗುರಿಗೂ ಸಮನಲ್ಲ. ಎರಡು ಸಲ ಸಂಸದನಾಗಿದ್ದವನು ಎಂಥ ಹೇಳಿಕೆ ನೀಡಬೇಕು. ಅಂತಹ ಬಾಲಿಷ ಹೇಳಿಕೆಗೆ ನಾನು ಪ್ರತಿಕ್ರಿಯಿಸೋದಿಲ್ಲ ಎಂದರು.
ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪನವರು ಸಿಎಂ ಆಗುವಾಗ ನನ್ನ ಪಾತ್ರ ಇತ್ತು. ಈಗ ಸಿಎಂ ಆದ್ರಲ್ಲ ಇನ್ನೇನು ಆ ದರ್ದು ಅವರಿಗೆ ಇಲ್ಲ. ಈಗ ಆರಾಮಾಗಿ ಇದ್ದಾರೆ. ನೋಡ್ಕೋತೀವಿ ಬಿಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.