ಮೈಸೂರು: 'ಮಂತ್ರಿಸ್ಥಾನ ಕೊಡಲಿಲ್ಲ ಅಂತ ಓಡಿ ಹೋಗುವವನು ನಾನಲ್ಲ. ಮುಂದಿನ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗದಿದ್ದರೂ ವಿಚಲಿತನಾಗುವುದಿಲ್ಲ' ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ.
ವಿದ್ಯಾರಣ್ಯಪುರಂನಲ್ಲಿ ಮಾತನಾಡಿದ ಅವರು, 'ನನಗೆ ಮಂತ್ರಿಸ್ಥಾನ ತಪ್ಪಿಸಲು ದೂರವಾಣಿ ಕರೆ ಮಾಡಿದವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮಂತ್ರಿಗಳು ಉತ್ತರ ಕೊಟ್ಟಿದ್ದಾರೆ. ಮಂತ್ರಿ ಆಗದಿದ್ದರೂ ರಾಮದಾಸ್ ಸಮಾಜಕ್ಕೆ ಮಾದರಿ ಅಂತ ಬಿಎಸ್ವೈ ಸೇರಿ ಮಂತ್ರಿಗಳೆಲ್ಲರೂ ಹೇಳಿದ್ದಾರೆ. ನನಗೆ ಅಷ್ಟೇ ಸಾಕು, ಮಂತ್ರಿಸ್ಥಾನಕ್ಕಿಂತ ಆ ಮಾತುಗಳು ಮಿಗಿಲಾದದ್ದು' ಎಂದರು.
'ನನ್ನ ತಂದೆ ಮಿಲಿಟರಿ ಅಧಿಕಾರಿ. ನನ್ನ ಮೈಯಲ್ಲಿ ಹರಿಯುತ್ತಿರುವುದು ಶುದ್ಧ ರಕ್ತ. ನೀನು ರಾಜಕೀಯಕ್ಕೆ ಹೋದರೆ ಕೈ ಕೆಸರು ಮಾಡಿಕೊಳ್ಳಬೇಡ ಅಂತ ನನ್ನ ತಂದೆ-ತಾಯಿ ಹೇಳಿದ್ದಾರೆ. ಅದರಂತೆ ನಡೆದುಕೊಂಡು ಬರುತ್ತಿದ್ದೇನೆ' ಎಂದರು.
'1994ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ಗೆ ಟಿಕೆಟ್ ಕೊಟ್ಟಾಗ ವಿಚಲಿತನಾಗಲಿಲ್ಲ. ರಾತ್ರಿ ಟಿಕೆಟ್ ಪಡೆದು ಬೆಳಗ್ಗೆ ವೇಳೆಗೆ ಅವರು ರಾಜೀನಾಮೆ ಕೊಟ್ಟರು. ಆಗ ಮಧ್ಯಾಹ್ನದ ವೇಳೆ ನನಗೆ ಟಿಕೆಟ್ ಸಿಕ್ಕಿತು. ನನ್ನ ಉದ್ದೇಶ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದಾಗಿತ್ತು. ಆದರೆ ಯಾವುದೇ ಲಾಬಿಗೆ ಹೋಗುವುದಿಲ್ಲ' ಎಂದು ತಿಳಿಸಿದರು.
ಸಂದೇಶ್ ನಾಗರಾಜ್ ಬಿಜೆಪಿ ಸೇರ್ಪಡೆಗೆ ಮೂಲ ಬಿಜೆಪಿಗರ ವಿರೋಧ ವಿಚಾರವಾಗಿ ಮಾತನಾಡಿ, 'ಪಕ್ಷದ ರಾಜ್ಯಾಧ್ಯಕ್ಷರು ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಾರೆ. ಸಾಧಕ-ಬಾಧಕಗಳ ಚರ್ಚೆಯಾಗಿಲ್ಲ' ಎಂದರು.
ಇದನ್ನೂ ಓದಿ: ಸಿಪಿವೈ ಪುತ್ರಿಗೆ ಕಾನೂನು ಕಂಟಕ: TAPCMS ನಿರ್ದೇಶಕಿಗೆ ಅಧ್ಯಕ್ಷನಿಂದ ಬೆದರಿಕೆ ಆರೋಪ