ಮೈಸೂರು: ಪ್ರಸ್ತುತ ರಾಜ್ಯ ರಾಜಕಾರಣದ ಬಗ್ಗೆ ಮಾತಾನಾಡಲು ಇಷ್ಟಪಡುವುದಿಲ್ಲವೆಂದು ಸಂಸದ ಪ್ರತಾಪ್ ಸಿಂಹ ಜಾರಿಕೆಯ ಉತ್ತರ ನೀಡಿದ್ದಾರೆ.
ಇಂದು ಮೈಸೂರು ವಿಮಾನ ನಿಲ್ದಾಣದಿಂದ 3 ನಗರಗಳಿಗೆ ಹೊಸದಾಗಿ ವಿಮಾನ ಹಾರಾಟಕ್ಕೆ ಚಾಲನೆ ನೀಡಿದ ಬಳಿ ಅವರು ಈ ರೀತಿ ಹೇಳಿದರು. ರಾಜ್ಯದ ಇಂದಿನ ರಾಜಕೀಯ ಸ್ಥಿತಿಯ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಪ್ರಧಾನಿ ಮೋದಿಯವರ ಕೈಕೆಳಗೆ ಕೆಲಸ ಮಾಡುತ್ತಿದ್ದೇನೆ. ಅದನ್ನು ಬಿಟ್ಟರೆ ಬೇರೇನೂ ಹೇಳುವುದಿಲ್ಲ ಎಂದರು.
ಇಂದಿನಿಂದ ಮೈಸೂರು ವಿಮಾನ ನಿಲ್ದಾಣದಿಂದ ಗೋವಾ, ಕೊಚ್ಚಿ ಮತ್ತು ಹೈದರಾಬಾದ್ಗೆ 3 ನಗರಗಳಿಗೆ ಅಲೈಯನ್ಸ್ ವಿಮಾನಯಾನವನ್ನು ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಆರಂಭಿಸಲಾಗಿದೆ. ಮೈಸೂರಿನ ಸುತ್ತಮುತ್ತ ಎರಡು ನ್ಯಾಷನಲ್ ಪಾರ್ಕ್ ಇದ್ದು, ಎರಡು ಅಣೆಕಟ್ಟುಗಳು, ಅರಮನೆ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿವೆ. ಇವುಗಳ ಅಭಿವೃದ್ಧಿಗೆ ಈ ವಿಮಾನಯಾನ ಸಹಾಯವಾಗಲಿದ್ದು, ಆಕ್ಟೋಬರ್ 27ಕ್ಕೆ ಮೈಸೂರಿನಿಂದ ಬೆಳಗಾವಿ, ಮಂಗಳೂರು, ತಿರುವನಂತಪುರಂ ಜೊತೆಗೆ ಚೆನ್ನೈಗೆ ಮತ್ತೊಂದು ವಿಮಾನಯಾನವನ್ನು ಆರಂಭಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಇದೇ ವೇಳೆ ತಿಳಿಸಿದರು.
ಇನ್ನು ಮುಂದಿನ 5 ವರ್ಷಗಳಲ್ಲಿ ಮೈಸೂರು ವಿಮಾನ ನಿಲ್ದಾಣವನ್ನು ವಿಸ್ತರಿಸಿ ಹೊಸ ವಿಮಾನ ನಿಲ್ದಾಣವಾಗಿ ಮಾಡುವ ಗುರಿ ಹೊಂದಲಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.