ಮೈಸೂರು: ಒಬ್ಬ ಕ್ಯಾಬಿನೆಟ್ ಮಿನಿಸ್ಟರ್ ಕ್ಷೇತ್ರದ ಮೆಡಿಕಲ್ ಕಾಲೇಜನ್ನು ಯಡಿಯೂರಪ್ಪ ಕಿತ್ತು ಬಿಸಾಕಿದರು. ನನಗೂ ರಾಜಕೀಯ ಚಕ್ರವನ್ನು ಹೇಗೆ ತಿರುಗಿಸಬೇಕು ಅನ್ನೋದು ಗೊತ್ತಿದೆ. ಸಮಯ ಬಂದಾಗ ಹೇಗೆ ಬೇಕೋ ಹಾಗೆ ತಿರುಗಿಸುತ್ತೇನೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸಿಎಂ ವಿರುದ್ಧ ಗುಡುಗಿದ್ರು.
ಮೈಸೂರಿನಲ್ಲಿ ಮಾತನಾಡಿದ ಅವರು, ಕೆಲವರು ನಾನು ಕ್ಷೇತ್ರಕ್ಕೆ ಏನೂ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ನನ್ನ ಕ್ಷೇತ್ರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಯಡಿಯೂರಪ್ಪ ಕಿತ್ತುಕೊಂಡರು. ರಾಜಕೀಯ ಗಾಡಿಯ ಚಕ್ರವನ್ನು ಹೇಗೆ ತಿರುಗಿಸಬೇಕು ಎಂದು ನನಗೂ ಗೊತ್ತಿದೆ. ನಾನು ಮೈಸೂರಿನ ಅಳಿಯ, ನನ್ನ ಕುಟುಂಬ ಇಲ್ಲಿನ ನಂಜನಗೂಡು ಹಾಗೂ ಚಾಮುಂಡಿ ಬೆಟ್ಟಕ್ಕೆ ಕಟ್ಟಿಕೊಂಡ ಹರಕೆ ತೀರಿಸಲು ಬಂದಿದ್ದೇನೆ. ಆದರೆ ಇಲ್ಲಿ ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡಿದ್ದೀರಿ, ನಿಮ್ಮ ಅಭಿಮಾನಕ್ಕೆ ಚಿರಋಣಿ ಎಂದರು.
ನಾನು ಜೈಲಿನಲ್ಲಿದ್ದಾಗ ಡಿಕೆಶಿ ರಾಜಕೀಯ ಜೀವನ ಮುಗಿಯಿತು ಎಂದು ಮಾಧ್ಯಮದವರು ಇಡೀ ರಾಜ್ಯಕ್ಕೆ ತೋರಿಸಿದರು. ಇದರ ಬಗ್ಗೆ ನಾನು ಏನು ಮಾತನಾಡುವುದಿಲ್ಲ, ಅದು ಅವರ ವ್ಯವಹಾರ. ಬೆಳಕು ಹೋದ ಮೇಲೆ ನೆರಳು ನಮ್ಮಿಂದ ಕಾಣೆಯಾಗುತ್ತದೆ. ಇದನ್ನು ಬಿಜೆಪಿ ಸ್ನೇಹಿತರು, ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದ್ರು.
ನ್ಯಾಯಾಲಯದ ಬಗ್ಗೆ ನನಗೆ ನಂಬಿಕೆ ಇದೆ. ನಾನು ಮಾಡಿದ ವ್ಯವಹಾರ ಕಾನೂನು ಪ್ರಕಾರವೇ ಇದೆ. ಜಾತಿ, ಧರ್ಮದ ಬಗ್ಗೆ ನಂಬಿಕೆ ಇಲ್ಲ, ಜನರು ಕಷ್ಟದ ಸಮಯದಲ್ಲಿ ತೋರಿದ ಪ್ರೀತಿಗೆ ನಾನು ಆಭಾರಿಯಾಗಿರುತ್ತೇನೆ ಎಂದು ಹೇಳಿದರು.