ಮೈಸೂರು: ರಾಷ್ಟ್ರಧ್ವಜಕ್ಕೆ ನಾನು ಅಪಮಾನ ಮಾಡಿಲ್ಲ. ನನ್ನ ಫೋಟೋ ತಿರುಚಲಾಗಿದೆ. ನಮ್ಮ ಬಳಿ ಫೋಟೋ ಮತ್ತು ವಿಡಿಯೋ ಸಾಕ್ಷ್ಯವಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದರು. ಇದೇ ಸಂದರ್ಭದಲ್ಲಿ, ರಾಜ್ಯದ ಮದರಸಗಳಲ್ಲೂ ರಾಷ್ಟ್ರಧ್ವಜ ಹಾರಿಸುವಂತೆ ಆದೇಶಿಸಲಾಗಿದೆ ಎಂದು ಪ್ರತಿಕ್ರಿಯಿಸಿದರು.
ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪದಡಿ ಕಾಂಗ್ರೆಸ್ ಮುಖಂಡರು ನೀಡಿರುವ ದೂರಿನ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ದೂರು ನೀಡಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಆದರೆ, ನಾನೆಲ್ಲೂ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿಲ್ಲ. ಕಾಂಗ್ರೆಸ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದರು.
ರಾಷ್ಟ್ರ ಧ್ವಜದ ಬಣ್ಣವನ್ನು ಕೆಂಪು, ಬಿಳಿ, ಹಸಿರು ಎಂದವರು ಯಾರು?. ರಾಷ್ಟ್ರ ಧ್ವಜದ ಬಣ್ಣವೂ ಸರಿಯಾಗಿ ಗೊತ್ತಿಲ್ಲದವರು ಮಾಡಿರುವ ತಪ್ಪನ್ನು ಮರೆಮಾಚಲು ನನ್ನ ವಿರುದ್ಧ ಆರೋಪ ಮಾಡಿ ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಬೇರೆ, ಈಗಿನ ಕಾಂಗ್ರೆಸ್ ಬೇರೆ ಎಂದು ಟೀಕಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತಿದ್ದಂತೆ ಕಾಂಗ್ರೆಸ್ ವಿಸರ್ಜಿಸುವಂತೆ ಮಹಾತ್ಮ ಗಾಂಧಿ ಕರೆ ನೀಡಿದ್ದರು. ಆದರೆ, ಕೆಲ ಸ್ವಾರ್ಥ ಕಾಂಗ್ರೆಸ್ಸಿಗರು ಅದನ್ನು ರಾಜಕೀಯವಾಗಿ ಬಳಸಿಕೊಂಡು ಉಳಿಸಿಕೊಂಡರು. ಆಗಿನ ಕಾಂಗ್ರೆಸ್ ನಾಯಕರು ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿ ಬಂದರು. ಆದರೆ, ಈಗ ಇರುವ ಯಾವುದೇ ಕಾಂಗ್ರೆಸ್ಸಿಗರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಜೈಲಿಗೂ ಹೋಗಿಲ್ಲ. ಬೇರೆ -ಬೇರೆ ಕಾರಣಕ್ಕಾಗಿ ಜೈಲಿಗೆ ಹೋಗಿ ಬಂದಿದ್ದಾರೆ, ಮುಂಬರುವ ದಿನಗಳಲ್ಲಿ ಮತ್ತಷ್ಟು ನಾಯಕರು ಜೈಲಿಗೆ ಹೋದರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ಕುಟುಕಿದರು.
ಇದನ್ನೂ ಓದಿ: ಶಾಲಾ ಮಕ್ಕಳ ರಕ್ಷಾ ಬಂಧನ ತೆಗೆಸಿದ ಶಿಕ್ಷಕಿ: ಪೋಷಕರ ತರಾಟೆ, ನಂತರ ಕ್ಷಮೆಯಾಚನೆ