ಮೈಸೂರು : ನೂತನವಾಗಿ ರಚನೆಯಾಗಿರುವ ನಮ್ಮ ಕಾಂಗ್ರೆಸ್ ಸಚಿವ ಸಂಪುಟ ಎಲ್ಲರೂ ಒಗ್ಗಟ್ಟಾಗಿದ್ದೇವೆ. ನನಗೆ ನೀಡಿರುವ ಸಮಾಜ ಕಲ್ಯಾಣ ಇಲಾಖೆಯ ಖಾತೆಯ ಬಗ್ಗೆ ಏನು ಬೇಸರ ಇಲ್ಲ. ನನಗೆ ಇದೇ ಖಾತೆ ಬೇಕೆಂದು ಯಾವಾಗಲೂ ಕೇಳಿಲ್ಲ. ಕೊಟ್ಟಿರುವ ಖಾತೆಯಲ್ಲಿ ಒಳ್ಳೆಯ ಕೆಲಸ ಮಾಡುತ್ತೇನೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಮೈಸೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ. ಎಚ್.ಸಿ.ಮಹಾದೇವಪ್ಪ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ಸಚಿವರಾದ ನಂತರ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಎಚ್.ಸಿ.ಮಹಾದೇವಪ್ಪ ಅವರಿಗೆ ಬೆಂಬಲಿಗರು, ಹಿತೈಷಿಗಳು ನಗರದ ಹುಣಸೂರಿನ ರಸ್ತೆಯಲ್ಲಿರುವ ಹೊಸ ಜಲದರ್ಶಿನಿ ಅತಿಥಿ ಗೃಹಕ್ಕೆ ಆಗಮಿಸಿಸದಸು, ಸಚಿವರಿಗೆ ಶಾಲು ಹೊದಿಸಿ, ಹೂಗುಚ್ಚ ನೀಡಿ ಅಭಿನಂದನೆಯನ್ನು ಸಲ್ಲಿಸಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಎಚ್.ಸಿ ಮಹಾದೇವಪ್ಪ, ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು. ಎಲ್ಲೆಡೆ ಭ್ರಷ್ಟಾಚಾರ, ದುರಾಡಳಿತ ಇತ್ತು. ಇದರಿಂದ ಬೇಸತ್ತು ಜನರು ಬಿಜೆಪಿಯನ್ನು ತಿರಸ್ಕಾರ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ಹಾಗಾಗಿ ಜನರ ನಿರೀಕ್ಷೆಗಳನ್ನು ಹುಸಿ ಮಾಡುವುದಿಲ್ಲ. ಅವರ ನಿರೀಕ್ಷೆಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದರು.
ಇದೇ ಖಾತೆ ಬೇಕೆಂದು ಕೇಳಿಲ್ಲ : ನನಗೆ ನೀಡಿರುವ ಖಾತೆಯ ಬಗ್ಗೆ ಯಾವುದೇ ಬೇಸರ ಇಲ್ಲ, ನನಗೆ ಇದೇ ಖಾತೆ ಬೇಕೆಂದು ಕೇಳಿಲ್ಲ. ಯಾವ ಖಾತೆಯಾದರು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಕಳೆದ ಮೂರು ವರ್ಷಗಳಿಂದ ಎಸ್ಸಿ, ಎಸ್ ಟಿ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನೇ ನೀಡಿಲ್ಲ. ಇದರಿಂದ ವಿದ್ಯಾರ್ಥಿಗಳು ಶಾಲೆಯ ಪ್ರವೇಶ ಶುಲ್ಕ ಕಟ್ಟಲು ಪರದಾಡುತ್ತಿದ್ದಾರೆ. ಇದನ್ನು ನಾವು ಮುಂದಿನ ದಿನಗಳಲ್ಲಿ ಸರಿ ಪಡಿಸುವ ಕೆಲಸ ಮಾಡುತ್ತೇವೆ ಎಂದು ಸಚಿವರು ವಾಗ್ದಾಳಿ ನಡೆಸಿದರು.
ನಾವು ಸುಳ್ಳನ್ನು ಸತ್ಯ ಮಾಡುವಂತ ಕೆಲಸ ಮಾಡುವುದಿಲ್ಲ. ನಾವು ಹೇಳಿದ್ದನ್ನೆ ಮಾಡುತ್ತೇವೆ. ಆದರೆ ಬಿಜೆಪಿಯವರು ರಾಜ್ಯದ ಜನರನ್ನು ಹಾಗೂ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಾರೆ. ಅವರು ಸೋತು ಹತಾಶರಾಗಿದ್ದು. ಈ ರೀತಿ ನಮ್ಮ ವಿರುದ್ಧ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದು, ನಮ್ಮ ಬದ್ದತೆಯನ್ನು ಪ್ರಶ್ನೆ ಮಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ. ನಾವು ನೀಡಿದ ಗ್ಯಾರಂಟಿಗಳನ್ನ ಈಡೇರಿಸುತ್ತೇವೆ ಎಂದು ಎಚ್.ಸಿ ಮಹಾದೇವಪ್ಪ ಹೇಳಿದರು .
ಗ್ಯಾರಂಟಿಗೆ ಸ್ವಲ್ಪ ಕಾಲಾವಕಾಶ ಬೇಕು : ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಶ್ರೀಘ್ರವೇ ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸುತ್ತಿರುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಸಚಿವರು, ರಾಜ್ಯದಲ್ಲಿ 2013 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ನಾವು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ. ಇನ್ನು ಸ್ವಲ್ಪ ಕಾಲಾವಕಾಶ ಬೇಕು. ಜುಲೈನಲ್ಲಿ ಬಜೆಟ್ ಮಂಡಿಸಿ, ಅನುಮೋದನೆ ಪಡೆದುಕೊಳ್ಳಬೇಕು. ಜೊತೆಗೆ ಗ್ಯಾರಂಟಿ ಯೋಜನೆಗಳ ಜಾರಿಗೆ ರೂಪುರೇಷೆಗಳನ್ನು ಸಿದ್ದ ಪಡಿಸಿಕೊಳ್ಳಬೇಕು. ಅಷ್ಟರಲ್ಲೇ ಅನುಷ್ಠಾನಗೊಳಿಸಿ ಎಂದು ಬಿಜೆಪಿಯವರು ಆತುರ ಪಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದು 9 ವರ್ಷ ಆಗಿದೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುತ್ತೇನೆ. ವಿದೇಶದಲ್ಲಿ ಇರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ಹಣ ಹಾಕುತ್ತೇವೆ ಎಂದು ಹೇಳಿದ್ದರು. ಆದರೆ, ಅಧಿಕಾರಕ್ಕೆ ಬಂದು 9ವರ್ಷ ಆದರೂ ಉದ್ಯೋಗವೂ ಇಲ್ಲ, ಹಣವೂ ಇಲ್ಲ. ಸೋಲಿನ ಹತಾಶೆಯಿಂದ ಬಿಜೆಪಿಯವರು ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ : ಗ್ಯಾರಂಟಿ ಜಾರಿ ಸಂಬಂಧ ಸಿಎಂ ಮಹತ್ವದ ಸಭೆ: ಗೃಹಲಕ್ಷ್ಮಿ ಯೋಜನೆಗೆ ವಾರ್ಷಿಕ 12,038 ಕೋಟಿ ಹೊರೆ?