ಮೈಸೂರು: ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸುವ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಜೊತೆ ಡಿಕೆಶಿ ಅವರು ಚರ್ಚೆ ಮಾಡಿಲ್ಲ. ಅವರ ಮೈಂಡ್ನಲ್ಲಿ ಏನಿದೆ ಎಂಬುದು ಗೊತ್ತಿಲ್ಲ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಇಂದು ತಮ್ಮ ಟಿ ಕೆ ಲೇಔಟ್ ನ ಮನೆಯ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಡಹಬ್ಬ ದಸರಾ ಮಹೋತ್ಸವ ಯಶಸ್ವಿಯಾಗಿ ನಡೆದಿದೆ. ಎಲ್ಲ ಪಕ್ಷದ ಶಾಸಕರು, ಜನಪ್ರತಿನಿಧಿಗಳು ಬೆಂಬಲ ನೀಡಿದ್ದಾರೆ. ಎಲ್ಲ ಕಾರ್ಯಗಳು ಚೆನ್ನಾಗಿ ನಡೆದಿವೆ ಎಂದರು.
ಉಸ್ತುವಾರಿ ಸಚಿವ ಮಹಾದೇವಪ್ಪ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದ ಸಿದ್ದರಾಮಯ್ಯ, ನಾಡಹಬ್ಬ ದಸರಾ ಆಚರಣೆಯ ಸ್ವರೂಪ ಬದಲಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ, ಇದನ್ನು ಮೈಸೂರು ಜನತೆಗೆ ಕೇಳೋಣ, ನಾಡಹಬ್ಬ ದಸರಾವನ್ನ ಯಾವ ರೀತಿ ಆಚರಣೆ ಬದಲಾವಣೆ ಮಾಡಬೇಕು ಎಂದು ಕೇಳೋಣ, ಆ ರೀತಿ ಆಚರಣೆ ಮಾಡೋಣ ಎಂದು ಹೇಳಿದರೆ, ಆ ರೀತಿ ಬದಲಾವಣೆ ಮಾಡೋಣ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಿದರು.
ಬಳಿಕ ರಾಮನಗರ ಜಿಲ್ಲೆಯ ಕನಕಪುರವನ್ನ ಬೆಂಗಳೂರಿಗೆ ಸೇರಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ ಈ ಬಗ್ಗೆ ನನ್ನ ಜೊತೆ ಡಿ ಕೆ. ಶಿವಕುಮಾರ್ ಚರ್ಚೆ ಮಾಡಿಲ್ಲ. ನನಗೆ ಅವರ ಮೈಂಡ್ನಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ರಾಮನಗರದ ವಿಚಾರದಲ್ಲಿ ಅವರನ್ನೇ ಕೇಳಿ. ಗೊತ್ತಿಲ್ಲದ ವಿಚಾರಗಳ ಬಗ್ಗೆ ಹೆಚ್ಚಾಗಿ ಮಾತನಾಡಬಾರದು ಎಂದು ಮುಖ್ಯಮಂತ್ರಿಗಳು ಇದೇ ವೇಳೆ ಹೇಳಿದರು.
ಬಿಜೆಪಿ ಟ್ವೀಟ್ಗೆ ಸಿಎಂ ತಿರುಗೇಟು: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಟಿಎಂ ಸರ್ಕಾರ ಎಂಬ ಬಿಜೆಪಿ ಟ್ವೀಟ್ಗೆ ತಿರುಗೇಟು ನೀಡಿದ ಸಿಎಂ, ಕೋಟ್ಯಂತರ ರೂಪಾಯಿ ಹಣದಲ್ಲಿ ಆಪರೇಷನ್ ಕಮಲ ಮಾಡಿದವರು ನಮ್ಮ ಬಗ್ಗೆ ಮಾತನಾಡುತ್ತಾರೆ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲು ಬಿಜೆಪಿ ಕಾರಣ. ವಿದ್ಯುತ್ ತೊಂದರೆ ಆಗಿದ್ದರೆ ಅದಕ್ಕೆ ಬಿಜೆಪಿ ಕಾರಣ. ಬಿಜೆಪಿ ಆಡಳಿತಾವಧಿಯಲ್ಲಿ ಒಂದೆ ಒಂದು ಮೆಗಾವ್ಯಾಟ್ ಯುನಿಟ್ ವಿದ್ಯುತ್ ಉತ್ಪಾದನೆ ಆಗಿಲ್ಲ ಎಂದರು.
ಬಿಜೆಪಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ರಾಜ್ಯವನ್ನು ಬಿಜೆಪಿಯವರು ದಿವಾಳಿ ಮಾಡಿ ಹೋಗಿದ್ದಾರೆ. ಹಣ ಇಲ್ಲದಿದ್ದರೂ 30 ಸಾವಿರ ಕೋಟಿ ಪೆಂಡಿಂಗ್ ಬಿಲ್ ಇದೆ, ಇದಕ್ಕೆ ಯಾರು ಹೊಣೆ. ನಮ್ಮ ಐದು ವರ್ಷದ ಆರ್ಥಿಕ ಪರಿಸ್ಥಿತಿ, ಬಿಜೆಪಿ ಅವಧಿಯ ಆರ್ಥಿಕ ಪರಿಸ್ಥಿತಿಯ ಬಗ್ಗೆ ಶ್ವೇತ ಪತ್ರ ಹೊರಡಿಸುತ್ತೇವೆ ಎಂದ ಸಿದ್ದರಾಮಯ್ಯ, ಕರ್ನಾಟಕದಿಂದ ಹೈ ಕಮಾಂಡ್ಗೆ ದುಡ್ಡು ಕಳಿಸುತ್ತೇವೆ ಎಂಬುದು ಸುಳ್ಳು. ನಾವು ಯಾರಿಗೂ ಒಂದು ಪೈಸೆ ದುಡ್ಡು ಕೊಟ್ಟಿಲ್ಲ ಎಂದು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.
ರಾಜಕೀಯದಲ್ಲಿ ವಿಲನ್ ಇದ್ದರೆ ಅದು ಮಿಸ್ಟರ್ ಕುಮಾರಸ್ವಾಮಿ: ರಾಜಕೀಯದಲ್ಲಿ ವಿಲನ್ ಇದ್ದರೆ ಅದು ಮಿಸ್ಟರ್ ಕುಮಾರಸ್ವಾಮಿ, ಸಮ್ಮಿಶ್ರ ಸರ್ಕಾರ ಬೀಳುವಾಗ ಅಮೆರಿಕದಲ್ಲಿ ಕುಳಿತಿದ್ದರು. ಇದಕ್ಕೆ ಏನು ಹೇಳಬೇಕು. ಇಡೀ ಒಂದು ವರ್ಷ ಎರಡು ತಿಂಗಳು ತಾಜ್ ವೆಸ್ಟ್ ಎಂಡ್ನಲ್ಲಿ ಕಾಲ ಕಳೆದರು. ವಿಧಾನ ಸಭೆಯಲ್ಲಿ ಬಿಜೆಪಿಯವರೇ ಸರ್ಕಾರ ಬೀಳಿಸಿದ್ದು ಎಂದು ರೆಕಾರ್ಡ್ ಆಗಿದೆ. ಅಸೆಂಬ್ಲಿಯ ರೆಕಾರ್ಡ್ ಅನ್ನು ಬೇಕಾದರೆ ಬಿಡುಗಡೆ ಮಾಡಿಸುತ್ತೇನೆ. ಸಚಿವರು ಮತ್ತು ಶಾಸಕರನ್ನು ಭೇಟಿ ಮಾಡದೇ, ಹೋಟೆಲ್ನಲ್ಲೇ ಕುಳಿತುಕೊಂಡು ಆರೋಪ ಮಾಡುತ್ತಿದ್ದಾರೆ. ರಾಜಕೀಯವಾಗಿ ಹತಾಶರಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬಿಜೆಪಿಯವರು ಹತಾಶರಾಗಿದ್ದಾರೆ. ಅವರಿಗಿಂತ ಕುಮಾರಸ್ವಾಮಿ ಹೆಚ್ಚು ಹತಾಶರಾಗಿದ್ದು. ಬಿಜೆಪಿ ಮತ್ತು ಜೆಡಿಎಸ್ ಅವರದ್ದು ಹೆಳವ ಮತ್ತು ಕುರುಡನ ಕಥೆಯಾಗಿದೆ ಎಂದರು.
ಇವರ ಮೇಲೆ ಅವರು, ಅವರ ಮೇಲೆ ಇವರು ಅಬಲಂಬಿತರಾಗಿದ್ದು. ಇಬ್ಬರದ್ದೂ ಖಾಲಿ ಡಬ್ಬ. ಹಾಗಾಗಿ ಅದು ಜಾಸ್ತಿ ಶಬ್ದ ಮಾಡುತ್ತಿದೆ. ತುಂಬಿದ ಕೊಡ ತುಳುಕುವುದಿಲ್ಲ ಎಂದು ದೋಸ್ತಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಹುಲಿ ಉಗುರು ಪ್ರಕರಣ.. ಯಾರೇ ಪ್ರಭಾವಿಗಳಿದ್ದರೂ ಬಿಡಲ್ಲ: ಸಚಿವ ಈಶ್ವರ ಖಂಡ್ರೆ