ಮೈಸೂರು: ನಾನು ಉದ್ದೇಶ ಪೂರ್ವಕವಾಗಿ ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರನ್ನು, ಒಡೆಯರ್ ಎಕ್ಸ್ ಪ್ರೆಸ್ ಎಂದು ಬದಲಾಯಿಸಿದ್ದೇನೆ. ಟಿಪ್ಪುವಿನ ಕೊಡುಗೆ ಏನು ಎಂದು ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಪ್ರಶ್ನಿಸಿದ್ದಾರೆ. ಅಲ್ಲದೇ ಹೆಸರು ಬದಲಾವಣೆಯಾದ ನಂತರ ಮೊದಲ ಬಾರಿಗೆ ಮಾಧ್ಯಮಗಳಿಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಟಿಪ್ಪುವಿಗೂ ಮೈಸೂರಿಗೂ ಏನು ಸಂಬಂಧ?, ಟಿಪ್ಪು ಶ್ರೀರಂಗಪಟ್ಟಣದವನು. ಮೈಸೂರಿಗೆ ಇಲ್ಲಿನ ಅಭಿವೃದ್ಧಿಗೆ ರಾಜರ ಕೊಡುಗೆಯಿದೆ. ಮೈಸೂರಿನ ಮಹಾರಾಜರು ಕೊಟ್ಟಿರುವ 100 ಕೊಡುಗೆಗಳನ್ನು ನಾನು ಹೇಳುತ್ತೇನೆ. ಟಿಪ್ಪುವನ್ನು ಬೆಂಬಲಿಸುವವರು ಟಿಪ್ಪು ಕೊಟ್ಟಿರುವ 3 ಸಾಧನೆಗಳನ್ನು ಹೇಳಿ ಸಾಕು. ಇದೇ ಕಾರಣಕ್ಕಾಗಿ ನಾನು ಉದ್ದೇಶ ಪೂರ್ವಕವಾಗಿಯೇ ಪ್ರಯತ್ನಪಟ್ಟು ಒಡೆಯರ್ ಎಕ್ಸ್ ಪ್ರೆಸ್ ಎಂದು ಹೆಸರು ಬದಲಾಯಿಸಿದ್ದೇನೆ ಎಂದು ಹೇಳಿದರು.
ಟಿಪ್ಪು ಕನ್ನಡ ವಿರೋಧಿ: ಟಿಪ್ಪು ಹೆಸರನ್ನು ರೈಲಿನಿಂದ ತೆಗೆದ ಮಾತ್ರಕ್ಕೆ ಜನರ ಮನಸ್ಸಿನಿಂದ ತೆಗೆಯಲು ಆಗುವುದಿಲ್ಲ ಎಂಬ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು, ಟಿಪ್ಪು ಒಬ್ಬ ಕನ್ನಡ ವಿರೋಧಿ. ಪರ್ಷಿಯನ್ ಭಾಷೆಯನ್ನು ಕನ್ನಡದ ಮೇಲೆ ಹೇರಿದ್ದಾನೆ. ಕಂದಾಯ ಇಲಾಖೆಯಲ್ಲಿನ ಪ್ರತಿಯೊಂದು ಪದಗಳು ಪರ್ಷಿಯನ್ ಕಡೆಯಿಂದ ಬಂದಿದ್ದು, ಅದನ್ನು ಬದಲಾಯಿಸಬೇಕು ಎಂದರು.
ಸಿದ್ದರಾಮಯ್ಯರಿಂದ ಪಾಠ ಕಲಿಯುವ ಅಗತ್ಯವಿಲ್ಲ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಓದಿದ ವಿಶ್ವವಿದ್ಯಾಲಯ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದ್ದು. ಆದರೂ ಅವರ ಬಗ್ಗೆ ಸಿದ್ದರಾಮಯ್ಯ ಉಡಾಫೆಯಿಂದ ಮಾತನಾಡುತ್ತಾರೆ. ಈ ಹಿಂದೆ ದೇವರಾಜ ಮಾರುಕಟ್ಟೆ ಸಂಬಂಧ ರಾಜರನ್ನು ಏಕ ವಚನದಲ್ಲಿ ಮಹಾರಾಜ ಏನು ಅವನ ಸ್ವಂತ ದುಡ್ಡಿನಿಂದ ಅಭಿವೃದ್ಧಿ ಮಾಡಿದ್ದಾನಾ ಎಂದಿದ್ದ ಸಿದ್ದರಾಮಯ್ಯ ಟಿಪ್ಪು ಪರ ಮಾತನಾಡುತ್ತಾರೆ. ಮೈಸೂರಿನ ಮಹಾರಾಜರ ಬಗ್ಗೆ ಕೇವಲವಾಗಿ ಮಾತನಾಡುವ ಸಿದ್ದರಾಮಯ್ಯ ಅವರಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ: ಟಿಪ್ಪು, ತಾಳಗುಪ್ಪ ಎಕ್ಸ್ಪ್ರೆಸ್ ರೈಲುಗಳ ಹೆಸರು ಬದಲಾವಣೆ: ಶುಕ್ರವಾರದ ಶುಭಸುದ್ದಿ ಎಂದ ಸಂಸದ ಪ್ರತಾಪ್ ಸಿಂಹ
ಹೆಚ್ ವಿಶ್ವನಾಥ್ಗೆ ತಿರುಗೇಟು: ಈ ಬಾರಿಯ ಅದ್ಧೂರಿ ದಸರಾ, ಅದ್ವಾನದ ದಸರಾ ಎಂಬ ಎಂಎಲ್ಸಿ ಹೆಚ್ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿ, ಮನೆಯಲ್ಲಿ ಮದುವೆಯೊಂದು ನಡೆದರು ಸಹಾ ಒಂದಷ್ಟು ತಪ್ಪುಗಳಾಗುತ್ತವೆ. ಇದು ಲಕ್ಷಾಂತರ ಜನ ಸಮೂಹ ಸೇರಿ ನಡೆಸಿದ ಕಾರ್ಯಕ್ರಮ, ಒಂದೆರಡು ತಪ್ಪು ಆಗುತ್ತದೆ. ಸುಮಾರು 40 ಲಕ್ಷ ಜನ ಸೇರಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆದಾಗ ಸಮಸ್ಯೆಗಳಾಗೋದು ಸಹಜ. ಅದನ್ನೇ ದೊಡ್ಡದು ಮಾಡಿಕೊಂಡು ಮೊಸರಲ್ಲಿ ಕಲ್ಲು ಹುಡುಕುವವರ ಬಗ್ಗೆ ಏನು ಹೇಳುವುದಿಲ್ಲ ಎಂದು ತಿರುಗೇಟು ನೀಡಿದರು.
ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ: ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಸಾಥಗಳ್ಳಿ ಬಳಿ ಸ್ಥಳ ಗುರುತಿಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರದ ಅನುಮೋದನೆ ಕೋರಲಾಗಿದೆ. ಅನುಮೋದನೆ ಸಿಗುತ್ತಿದ್ದಂತೆ ಅದನ್ನು ಶೀಘ್ರವೇ ಕರ್ನಾಟಕ ಕ್ರಿಕೆಟ್ ಅಕಾಡೆಮಿ (ಕೆಎಸ್ಸಿಎ) ಗೆ ಹಸ್ತಾಂತರ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಉನ್ನತ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂ ಮೈಸೂರಿನಲ್ಲಿ ತಲೆ ಎತ್ತಲಿದೆ ಎಂದು ಸಂಸದ ಪ್ರತಾಪ್ ಸಿಂಹ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.