ಮೈಸೂರು: ಜೆಡಿಎಸ್ ಪಕ್ಷವನ್ನು ತ್ಯಜಿಸುವ ಬಗ್ಗೆ ಸುಳಿವು ನೀಡಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, 'ನನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ' ಎಂದು ಪುನರುಚ್ಚರಿಸಿದ್ದಾರೆ.
ಜೆಎಸ್ಎಸ್ ವಿದ್ಯಾಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಹೆಚ್.ಡಿ.ದೇವೇಗೌಡರು ತಿರುಪತಿಯಲ್ಲಿ ಸಿಕ್ಕಿ ಒಳ್ಳೆಯದಾಗಲಿ ಎಂದರು ಅಷ್ಟೇ. ನಾನು ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಏನು ಹೇಳಬೇಕೋ ಎಲ್ಲವನ್ನೂ ಹೇಳಿದ್ದೇನೆ' ಎಂದರು.
ಚಾಮುಂಡೇಶ್ವರಿ ಕ್ಷೇತ್ರದಿಂದ ಭವಾನಿ ರೇವಣ್ಣ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯಿಸಿ, 'ಭವಾನಿಯವರು ಮೈಸೂರಿಗೆ ಬರುವ ಬಗ್ಗೆ ನನಗೆ ಮಾಹಿತಿ ಇಲ್ಲ. 224 ಕ್ಷೇತ್ರಗಳಲ್ಲಿ ಮೀಸಲು ಕ್ಷೇತ್ರಗಳಲ್ಲಿ ಆಯಾ ಸಮುದಾಯದವರೇ ನಿಲ್ಲಬೇಕು. ಸಾಮಾನ್ಯ ಕ್ಷೇತ್ರಗಳಲ್ಲಿ ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು. ಚುನಾವಣೆಗೆ ಇನ್ನೂ 20 ತಿಂಗಳು ಬಾಕಿ ಇದೆ. ಇಷ್ಟೊಂದು ಆತುರ ಬೇಡ' ಎಂದರು.
'ನಿಖಿಲ್ ಕುಮಾರಸ್ವಾಮಿಯವರಿಗೆ ಗಂಡು ಮಗು ಜನಿಸಿರುವುದು ಸಂತಸದ ವಿಚಾರ. ಅವರಿಗೆ ಕರೆ ಮಾಡಿ ಶುಭ ಕೋರಿದ್ದೇನೆ' ಎಂದು ತಿಳಿಸಿದರು.
ಇದನ್ನೂ ಓದಿ: ಗಡಿಭಾಗದಲ್ಲಿ ಬಸ್ ಮೇಲೆ ಸಲಗ ದಾಳಿ, ಗ್ಲಾಸ್ ಪುಡಿ-ಪುಡಿ.. ಪ್ರಯಾಣಿಕರು, ಚಾಲಕ ಕಕ್ಕಾಬಿಕ್ಕಿ- Video