ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ ಮತ್ತು ಗೆಲ್ಲುವ ವಿಶ್ವಾಸ ಇದೆ. ಕಳೆದ ಬಾರಿ ಮತ ವಿಭಜನೆಯಿಂದ ಹಾಗೂ ಆಡಳಿತ ವಿರೋಧಿ ಅಲೆ ಇದ್ದುದರಿಂದ ಸೋತೆ, ನಾನು ನನ್ನ ತಪ್ಪಿನಿಂದ ಸೋತಿಲ್ಲ ಎಂದು ಮೈಸೂರು ನಗರದ ಚಾಮರಾಜ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ವಾಸು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸಿದ್ದರಾಮಯ್ಯ ಆಪ್ತ ಹರೀಶ್ ಗೌಡರಿಗೆ ಈ ಬಾರಿ ಕಾಂಗ್ರೆಸ್ ನಿಂದ ಟಿಕೇಟ್ ಸಿಗುತ್ತದೆ ಮತ್ತು ಸಿದ್ದರಾಮಯ್ಯ ನಿಮಗೆ ಟಿಕೆಟ್ ಸಿಗದಂತೆ ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಯಿಸಿ, ಸಿದ್ದರಾಮಯ್ಯ ಪಕ್ಷದ ನಾಯಕರು ಅವರು ಯಾರೊಬ್ಬರ ಪರವಾಗಿ ಇಲ್ಲ, ಜನ ಸುಮ್ಮನೆ ಏನೇನೋ ಹಬ್ಬಿಸುತ್ತಿದ್ದಾರೆ ಆದು ಸರಿಯಾಲ್ಲ ಎಂದರು.
ಇನ್ನು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಈ ಬಾರಿ ಮೈಸೂರು ನಗರದ ಚಾಮರಾಜ ಕ್ಷೇತ್ರದಿಂದ ವಾಸುಗೆ ಕಾಂಗ್ರೆಸ್ ಟಿಕೆಟ್ ಸಿಗಬೇಕು ಎಂದು ಹೇಳಿದ್ದಾರೆ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ವೀರಪ್ಪ ಮೊಯ್ಲಿ ನನ್ನನ್ನು ಹತ್ತಿರದಿಂದ ನೋಡಿದ್ದಾರೆ, ನಾನು ಯಾವ ವ್ಯಾಮೋಹಕ್ಕೂ ಒಳಗಾಗಲ್ಲ ಎಂದು ಅವರಿಗೆ ಗೊತ್ತಿದೆ ಹಾಗಾಗೀ ಅವರು ಅ ರೀತಿ ಹೇಳಿದ್ದಾರೆ, ಅವರು ನನ್ನ ಬಗ್ಗೆ ಮಾತ್ರ ಈ ರೀತಿ ಹೇಳಿಲ್ಲ ತನ್ವೀರ್ ಸೇಠ್ ಬಗ್ಗೆ ಕೂಡ ಹೇಳಿದ್ದಾರೆ ಎಂದರು.
ನಾನು ಗೆದ್ದರು ಸೋತರೂ ಜನರ ನಡುವೆ ಇರುತ್ತೇನೆ: ಮೈಸೂರಿನ ಬೇರೆ ಬೇರೆ ಕ್ಷೇತ್ರಗಳಲ್ಲಿ ಗೊಂದಲಗಳಿವೆ, ಆದರೆ, ನಗರದ ನಮ್ಮ ಚಾಮರಾಜ ಕ್ಷೇತ್ರದಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮಲ್ಲಿ ನಾನು ಮತ್ತೆ ಮತ್ತೊಬ್ಬ ಮಾತ್ರ ಆಕಾಂಕ್ಷಿಗಳಿದ್ದು, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ನಾನು ನಾಲ್ಕು ಬಾರಿ ಸ್ಪರ್ಧೆ ಮಾಡಿದ್ದೇನೆ. ನನ್ನ ಅನುಭವ, ಪಕ್ಷ ನಿಷ್ಠೆ, ನಾನು ಮಾಡಿರುವ ಕೆಲಸಗಳನ್ನ ಪರಿಗಣಿಸಿ ನನಗೆ ಪಕ್ಷ ಟಿಕೆಟ್ ನೀಡುತ್ತಿದೆ. ನಾನು ಗೆದ್ದರು ಸೋತರೂ ಜನರ ನಡುವೆ ಇರುತ್ತೇನೆ. ಈ ಬಾರಿ ನನಗೆ ಟಿಕೆಟ್ ಜೊತೆಗೆ ಗೆಲ್ಲುವ ವಿಶ್ವಾಸ ಇದೆ ಎಂದು ಮಾಜಿ ಶಾಸಕ ವಾಸು ಹೇಳಿದರು.
ವಾಸು ಅವರ ಹಿರಿಯ ಮಗ ಕವೀಶ್ ಗೌಡ ಇತ್ತೀಚೆಗೆ ಬಿಜೆಪಿ ಪಕ್ಷ ಸೇರ್ಪಡೆ ಆಗಿದ್ದು, ಅವರು ಕೂಡ ಚಾಮರಾಜ ಅಥವಾ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಅಪಪ್ರಚಾರ ಆದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಶಾಸಕ ವಾಸು, ನನ್ನ ಮಗ ನನ್ನ ವಿರುದ್ಧ ಪ್ರಚಾರ ಮಾಡಿದರು. ನಾನು ಅದನ್ನ ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತೇನೆ. ಇದರಿಂದ ನನಗೆ ಯಾವುದೇ ಹಿನ್ನಡೆ ಆಗುವುದಿಲ್ಲ ಎಂದರು.
ನನಗೆ ಯಾವುದೇ ಮೋಹ ಇಲ್ಲ:ಈ ಬಾರಿ ಗೆಲ್ಲುವ ಅಚಲ ವಿಶ್ವಾಸ ಇದೆ. ನಾನು ಎಂದಿಗೂ ಅಧಿಕಾರಕ್ಕೆ ಆಸೆ ಪಟ್ಟವನಲ್ಲ. ನನಗೆ ಯಾವುದೇ ಮೋಹ ಇಲ್ಲ. ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಆಗಿದ್ದಾಗ ನನ್ನನ್ನು ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದರು, ನಾನು ಬೇಡ ಎಂದೆ. ನಾನು ಮಂತ್ರಿ ಆಗಿದ್ದರೆ ನನ್ನ ಕ್ಷೇತ್ರದಲ್ಲಿ ಜಿಲ್ಲಾ ಆಸ್ಪತ್ರೆ, ಪಂಚಕರ್ಮ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ, ಯೋಗ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮಹಾರಾಣಿ ಕಾಲೇಜು ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳು ಆಗುತ್ತಿರಲಿಲ್ಲ. ನನಗೆ ಈ ಬಾರಿ ಟಿಕೆಟ್ ಸಿಗುವುದು ಖಚಿತ, ನಾನು ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.