ಮೈಸೂರು: ನಾನೂ ಕೂಡಾ ಸಚಿವ ಸ್ಥಾನದ ಆಕಾಂಕ್ಷಿ ಎಂದು ಶಾಸಕ ರೇಣುಕಾಚಾರ್ಯ ತಮ್ಮ ಮನದ ಇಂಗಿತವನ್ನು ಹೊರ ಹಾಕಿದ್ದಾರೆ.
ಸುತ್ತೂರು ಶ್ರೀಕ್ಷೇತ್ರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲುವ ವ್ಯಕ್ತಿಗೆ ಅಧ್ಯಕ್ಷನಾಗಬೇಕು ಎಂಬ ಆಸೆ ಇರುತ್ತದೆ. ನಾನು ಅಬಕಾರಿ ಸಚಿವನಾಗಿದ್ದಾಗ ವಿಧಾನಸೌಧ ಮೂರನೇ ಮಹಡಿಯಲ್ಲಿದ್ದ ಅಬಕಾರಿ ಇಲಾಖೆಯ ಜನಸಾಮಾನ್ಯರ ಬಳಿ ತೆಗೆದುಕೊಂಡು ಹೋದೆ. ನಕಲಿ ಮದ್ಯ, ಕಳ್ಳಬಡ್ಡಿ ನಿಲ್ಲಿಸಿದೆ. ಅಲ್ಲದೇ ಅಬಕಾರಿ ಬೊಕ್ಕಸ ತುಂಬಿಸಿದೆ ಎಂದರು.
ನಾನು ಸಚಿವನಾಗಬೇಕು ಎನ್ನುವುದು ಕಾರ್ಯಕರ್ತರ ಹಾಗೂ ಅಭಿಮಾನಿಗಳ ಒತ್ತಾಯವಾಗಿದೆ. ಸಚಿವನಾದರೆ ಒಳ್ಳೆಯ ಕೆಲಸ ಮಾಡ್ತೇನಿ ಎಂಬ ವಿಶ್ವಾಸ ಇದೆ. ಉಪಮುಖ್ಯಮಂತ್ರಿ ಸ್ಥಾನದ ಬೇಕೋ ಬೇಡವೋ ಎನ್ನುವ ಬಗ್ಗೆ ಯಾರ ಗಮನಕ್ಕೆ ತರಬೇಕು ತಂದಿದ್ದೀನಿ. ಪುನಃ ಆ ವಿಷಯ ಮಾತನಾಡುವುದಿಲ್ಲ ಎಂದರು.
ನನ್ನ ಕ್ಷೇತ್ರದ ಮುಸ್ಲಿಂರಿಗೆ ಮೂಲ ಸೌಕರ್ಯ ಕೊಡ್ತೇನಿ. ಆದರೆ, ವಿಶೇಷ ಪ್ಯಾಕೇಜ್ ನೀಡುವುದಿಲ್ಲ. ಮತವನ್ನು ಬೇರೆಯವರಿಗೆ ನೀಡಿ ಅಭಿವೃದ್ಧಿ ವಿಚಾರ ಬಂದಾಗ ನಮ್ಮ ಬಳಿ ಬರುತ್ತಾರೆ. ಅದಕ್ಕಾಗಿ ಮುಸ್ಲಿಮರಿಗೆ ನಾನು ಕೊಡುವುದಿಲ್ಲವೆಂದು ಹೇಳಿದ್ದೀನಿ ಎಂದು ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡರು.
ಸಿಎಎ ವಿರೋಧಿಸುವವರು ದೇಶದ್ರೋಹಿಗಳು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೀಮಿತಿ ಕಳೆದುಕೊಂಡು ಮಾತನಾಡುತ್ತಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜನಗಣತಿ ಮಾಡಲು ಅನುದಾನ ನೀಡಲಿಲ್ಲವೇ, ಸಿಎಎಯಿಂದ ಯಾರಿಗೂ ಅಪಾಯವಾಗುವುದಿಲ್ಲ ಎಂದರು.