ಮೈಸೂರು: ಪ್ರೀತಿಸಿ ಮದುವೆಯಾಗಿದ್ದ ಗರ್ಭಿಣಿ ಹೆಂಡತಿಯನ್ನು ಪಾಪಿ ಪತಿಯೊಬ್ಬ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಹಿನಕಲ್ ನಿವಾಸಿ ಪ್ರಮೋದ್ ಎಂಬಾತನೇ ತನ್ನ ಪತ್ನಿ ಅಶ್ವಿನಿ (23)ಯನ್ನು ಉಸಿರುಗಟ್ಟಿಸಿ ದಾರುಣವಾಗಿ ಹತ್ಯೆ ಮಾಡಿದವನು. ಕೃಷಿ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರು ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಮೋದ್, ಅನ್ಯ ಜಾತಿಯ ಅಶ್ವಿನಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಅಶ್ವಿನಿ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಒಂದೆರಡು ತಿಂಗಳ ಕಾಲ ಅನ್ಯೋನ್ಯವಾಗಿದ್ದ ದಂಪತಿಯ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆಯಂತೆ. ಆಗಾಗ್ಗೆ ಜಗಳ ಸಹ ನಡೆಯುತ್ತಿತ್ತು ಎಂಬ ಮಾಹಿತಿ ದೊರೆತಿದೆ.
ಗರ್ಭಿಣಿಯಾಗಿದ್ದ ತನ್ನ ಹೆಂಡತಿ ಹೊಟ್ಟೆಯಿಂದ ಹುಟ್ಟುವ ಮಗು ಯಾವ ಜಾತಿಗೆ ಸೇರಲಿದೆ ಎಂಬ ಗೊಂದಲದಲ್ಲಿದ್ದ ಪ್ರಮೋದ್, ಮಗುವನ್ನು ತೆಗೆಸುವಂತೆಯೂ ಪತ್ನಿಗೆ ಒತ್ತಡ ಹೇರುತ್ತಿದ್ದಂತೆ.ಇದರಿಂದಾಗಿ ನಿತ್ಯ ಮನೆಯಲ್ಲಿ ಗಲಾಟೆ ನಡೆಯುತ್ತಿದ್ದು ಈ ಬಗ್ಗೆ ಎರಡೂ ಕುಟುಂಬದ ಹಿರಿಯರು ರಾಜಿ ಸಂಧಾನ ಕೂಡ ನಡೆಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಉತ್ತರಾಖಂಡ್ ಮುಖ್ಯಮಂತ್ರಿ ಆಯ್ಕೆ: ಚುನಾವಣೆಯಲ್ಲಿ ಸೋತರೂ ಪುಷ್ಕರ್ಗೆ ಪಟ್ಟ!
ಆದರೆ, ಶುಕ್ರವಾರ ಸಂಜೆ ಕಾರಿನಲ್ಲಿ ಮನೆಗೆ ಬಂದ ಪ್ರಮೋದ್, ಅಶ್ವಿನಿ ಜೊತೆ ಜಗಳವಾಡಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಲ್ಲದೇ, ಶವವನ್ನು ಕಾರಿನಲ್ಲಿ ಹಾಕಿಕೊಂಡು ಬೆಳವಾಡಿಯಲ್ಲಿರುವ ಕೆರೆಗೆ ಬಿಸಾಕಿದ್ದಾನೆ. ನಂತರ ಎಂದಿನಂತೆ ಮನೆಗೆ ಬಂದ ಪ್ರಮೋದ್ ಶನಿವಾರ ಕೆಲಸಕ್ಕೆ ತೆರಳಿದ್ದಾನೆ.
ಪುತ್ರಿ ಅಶ್ವಿನಿಯಿಂದ ಯಾವುದೇ ಕರೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೋಷಕರು, ವಿಜಯ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾರೆ. ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಪ್ರಮೋದ್ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಬೆಳವಾಡಿ ಕೆರೆಯಲ್ಲಿ ಹಾಕಿರುವುದಾಗಿ ತಿಳಿಸಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪ್ರಮೋದ್‌ನನ್ನು ಬಂಧಿಸಿದ್ದು ಕಿರುಕುಳ ನೀಡಿದ ಪ್ರಮೋದ್‌ನ ಪೋಷಕರು ಮತ್ತು ಸೋದರಿಯ ಬಂಧನಕ್ಕೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮೂರು ದಿನಗಳ ಹಿಂದೆ ಕೊಲೆ ಮಾಡಿದ್ದ ಪತ್ನಿಯ ಶವ ಇಂದು ಸಂಜೆ ಸಿಕ್ಕಿದೆ.