ಮೈಸೂರು : ಪಕ್ಕದ ಮನೆ ಯುವಕನ ಜೊತೆಗಿನ ಅಕ್ರಮ ಸಂಬಂಧ ಗಂಡನಿಗೆ ಗೊತ್ತಾಯಿತು ಎಂದು ಗಂಡನನ್ನು ಕೊಂದ ಹೆಂಡತಿ ಹೃದಯಾಘಾತ ಎಂದು ನಾಟಕವಾಡಿ ಕೊನೆಗೆ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಹುಣಸೂರು ತಾಲೂಕಿನ ಹುಂಡಿಮಾಳ ಗ್ರಾಮದಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಹುಂಡಿಮಾಳ ಗ್ರಾಮದ ಲೋಕಮಣಿ(36) ಮೃತ ದುರ್ದೈವಿಯಾಗಿದ್ದಾನೆ.
ಈತ 9 ವರ್ಷಗಳ ಹಿಂದೆ ಹೆಚ್ ಡಿ ಕೋಟೆ ತಾಲೂಕಿನ ಅಗಸನ ಹುಂಡಿ ಗ್ರಾಮದ ಶಿಲ್ಪ ಎಂಬಾಕೆಯನ್ನು ಮದುವೆಯಾಗಿದ್ದನು. ಈಕೆಗೆ ಪಕ್ಕದ ಮನೆಯ ಯುವಕನ ಜೊತೆ ಅಕ್ರಮ ಸಂಬಂಧ ಇತ್ತು ಎಂದು ಹೇಳಲಾಗಿದ್ದು, ಈ ವಿಚಾರ ಗಂಡನಿಗೆ ತಿಳಿದು ಈ ಬಗ್ಗೆ ಮನೆಯಲ್ಲಿ ಗಲಾಟೆ ನಡೆದಿತ್ತು. ಈ ಮಧ್ಯೆ ಗಂಡ ಲೋಕಮಣಿ ಮಲಗಿದ್ದ ಸಂದರ್ಭದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿ ಹೃದಯಘಾತದಿಂದ ಮೃತಪಟ್ಟಿದ್ದಾನೆ ಎಂದು ಬಿಂಬಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಳು.
ಆದರೆ, ಲೋಕಮಣಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಂಬಂಧಿಕರು ಹುಣಸೂರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಪೊಲೀಸರು ಹೆಂಡತಿ ಶಿಲ್ಪಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರ ಬಿದ್ದಿದೆ. ಸದ್ಯ ಪಕ್ಕದ ಮನೆ ಯುವಕ ನಾಪತ್ತೆಯಾಗಿದ್ದು ಆತನ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.