ಮೈಸೂರು: ನಿಮಗೆ ಮಾನಾ ಮರ್ಯಾದೆ ಇದೆಯಾ ಎಂದು ಕಾಂಗ್ರೆಸ್ ಹಾಗೂ ಜೆಡಿಸ್ ಪಕ್ಷದ ವಿರುದ್ಧ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆಯಿಂದ ಇಬ್ಬರೂ ಒಂದಾಗುವುದರ ಬಗ್ಗೆ ಮಾತನಾಡುತ್ತಿದ್ದೀರಿ. ಹಾಗಿದ್ದರೆ ನೀವು ಏಕೆ ಬೇರೆಯಾಗಿದ್ದು?. ಈಗ ಮತ್ತೆ ಒಟ್ಟಾಗಿ ಸರ್ಕಾರ ರಚನೆ ಮಾಡುವುದರ ಬಗ್ಗೆ ಮಾತನಾಡುತ್ತೀರಲ್ಲ, ನಿಮಗೆ ಮರ್ಯಾದೆ ಇದೆಯಾ ಎಂದು ಗರಂ ಆದರು.
ಜೆಡಿಎಸ್ ಹಾಗೂ ಕಾಂಗ್ರೆಸ್ ಇಬ್ಬರೂ ಈ ತಾಲೂಕಿನ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ನಿಮ್ಮ ಅಭ್ಯರ್ಥಿಗಳು ಗೆದ್ದರೆ ಇಂತಹ ಅಭಿವೃದ್ಧಿ ಕೆಲಸ ಮಾಡುತ್ತೀವಿ ಎನ್ನುತ್ತಿದ್ದೀರಾ?. ನಾನು ಹಣಕ್ಕಾಗಿ, ಅಧಿಕಾರಕ್ಕಾಗಿ ಜೆಡಿಎಸ್ಗೆ ರಾಜೀನಾಮೆ ಕೊಟ್ಟಿಲ್ಲ. ನಾನು ಸ್ವಾಭಿಮಾನಕ್ಕಾಗಿ ರಾಜೀನಾಮೆ ಕೊಟ್ಟಿದ್ದೇನೆ ಎಂದರು.
ಆಗ ಮತ ಕೊಟ್ಟ ಜನರಿಗೆ ಹೇಳಲು ಸಾಧ್ಯವಾಗಲಿಲ್ಲ. ನನ್ನ ಮನಸ್ಸಿಗೆ ಘಾಸಿಯಾಗಿ ನಾನು ರಾಜೀನಾಮೆ ಕೊಡಬೇಕಾಗಿತ್ತು. ಹುಣಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹನುಮ ಜಯಂತಿ ವೇಳೆ ಸುಳ್ಳು ಕೇಸ್‌ಗಳನ್ನು ಹಾಕಲಾಗಿದೆ. 80 ವರ್ಷ ವಯಸ್ಸಾದವರಿಗೂ ರೌಡಿಶೀಟರ್ ಓಪನ್ ಮಾಡಲಾಗಿದೆ ಎಂದರು.
ಹುಣಸೂರಿನಲ್ಲಿ ಹಬ್ಬ ಹರಿದಿನ ಮಾಡಲು ಪೊಲೀಸ್ ಅನುಮತಿ ಬೇಕಿದೆ. ನಾವು ಅಭಿವೃದ್ಧಿಗೆ ಮತ ಕೇಳುತ್ತಿದ್ದೇವೆ. ಕಾಂಗ್ರೆಸ್ ಮತ ಕೇಳುತ್ತಿರುವುದು ಜನರ ಮೇಲೆ ಕೇಸ್ ಹಾಕಿಸಲಾ?. ನಿಮಗೆ ಮತ ಹಾಕಿ ಜನ ಜೈಲಿಗೆ ಹೋಗಬೇಕಾ ಎಂದು ಪ್ರಶ್ನಿಸಿದರು.
ನಾನು ಅಧಿಕಾರಕ್ಕೆ ಬಂದ ತಕ್ಷಣ ಜನರ ಮೇಲಿನ ಕೇಸ್‌ಗಳನ್ನು ವಾಪಸ್ ತೆಗೆಸಲಾಗುತ್ತೆ. ಈ ಬಗ್ಗೆ ಮುಖ್ಯಮಂತ್ರಿಗಳೇ ಭರವಸೆ ನೀಡಿದ್ದಾರೆ. ಪ್ರೀತಿ ವಿಶ್ವಾಸಕ್ಕೆ ಬಿಜೆಪಿಗೆ ಮತ ಕೊಡಿ. ಜೈಲಿಗೆ ಹೋಗಬೇಕಾದರೆ ಕಾಂಗ್ರೆಸ್‌ಗೆ ಮತ ಹಾಕಿ ಎಂದು ಕಿಡಿಕಾರಿದರು.
ಲಕ್ಷ್ಮಣ ತೀರ್ಥ ನದಿ ಶುದ್ಧೀಕರಣಕ್ಕೆ ಕ್ರಮ ವಹಿಸಲಾಗುತ್ತಿದೆ. ಇದಕ್ಕೆ 125 ಕೋಟಿ ವೆಚ್ಚದ ಪ್ರಾಜೆಕ್ಟ್ ರೆಡಿಯಾಗಿದೆ. ಹುಣಸೂರು ಜಿಲ್ಲೆಯಾಗಲು ಯೋಗ್ಯವಾದ ಸ್ಥಳವಾಗಿದೆ ಎಂದರು.
ನಾನು ಹುಣಸೂರು ಅಭಿವೃದ್ಧಿಗೆ ಹಲವಾರು ಕನಸುಗಳನ್ನು ಕಂಡಿದ್ದೇನೆ. ಆ ಎಲ್ಲಾ ಕನಸುಗಳನ್ನು ನನಸು ಮಾಡಲು ಮತ ಭಿಕ್ಷೆ ನೀಡಿ. ಹುಣಸೂರು ಜಿಲ್ಲೆ ಕಡ್ಡಾಯವಾಗಿ ಮಾಡೇ ಮಾಡುತ್ತೇವೆ. ಇದು ಚುನಾವಣೆಗಾಗಿ ಎತ್ತಿದ ವಿಚಾರವಲ್ಲ. ಒಂದು ವರ್ಷದಿಂದ ಹುಣಸೂರು ಜಿಲ್ಲೆ ಬಗ್ಗೆ ಮಾತನಾಡುತ್ತಾ ಬಂದಿದ್ದೇನೆ ಎಂದರು.
ಹುಣಸೂರು ಕೃಷಿ ಆರ್ಥಿಕ ವಲಯ ಚೆನ್ನಾಗಿದೆ. ರೈತರನ್ನು ಆರ್ಥಿಕವಾಗಿ ಮೇಲೆತ್ತಬೇಕು. ಬೆಳಿಗ್ಗೆ ಎಪಿಎಂಸಿ ಸದಸ್ಯರು ಬಂದು ಹುಣಸೂರು ಜಿಲ್ಲಾ ಮಾರುಕಟ್ಟೆ ಹೇಗಿರುತ್ತೆ ಅಂತ ಕೇಳಿದ್ದಾರೆ. ಹೀಗಾಗಿ ದೇವರಾಜ ಅರಸು ಹೆಸರಲ್ಲೇ ಜಿಲ್ಲೆ ಮಾಡಲು ಬದ್ಧವಾಗಿದೆ ಎಂದರು.
ರಾಜ್ಯದಲ್ಲಿ ಸಾಹಿತ್ಯ ಬೌದ್ಧಿಕ ದಿವಾಳಿಯಾಗಿದೆ. ಸಾಹಿತಿಗಳು ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ. ಜನತಂತ್ರ ವ್ಯವಸ್ಥೆಯಲ್ಲಿ ನೀವು ಎಲ್ಲಾದರೂ ರಾಜಕೀಯವಾಗಿ ಚರ್ಚೆ ಮಾಡಿದ್ದೀರಾ?. ಸಾಹಿತಿಗಳು, ಚಿಂತಕರು ಮನೆಯಲ್ಲಿ ಕೂತು ಹೇಳಿಕೆ ಕೊಡುತ್ತೀರಾ. ಜನರ ಮನಸ್ಸಿನಲ್ಲಿ ಏನಿದೆ ಅಂತ ಬಂದು ನೋಡಿದ್ದೀರಾ?. ನೀವು ಯಾವುದೋ ಪಕ್ಷ, ಯಾವುದೋ ರಾಜಕಾರಣಿ ಪರ ಮಾತನಾಡುತ್ತೀರಿ. ನಾನು ನಿಮ್ಮಂತೆ ಕಾಗಕ್ಕ, ಗೂಬಕ್ಕನ ಕಥೆ ಬರೆದಿಲ್ಲ. ನಾನು ವಸ್ತುಸ್ಥಿತಿಯ ಸಾಹಿತಿ ಎಂದು ಅನರ್ಹ ಶಾಸಕರನ್ನು ಸೋಲಿಸಿ ಅಂತಾ ಹೇಳಿದ ಸಾಹಿತಿಗಳ ವಿರುದ್ಧ ಹರಿಹಾಯ್ದರು.