ಮೈಸೂರು: ಒಂದೇ ತಿಂಗಳೊಳಗೆ ಐತಿಹಾಸಿಕ ನಂಜುಂಡೇಶ್ವರ ದೇವಾಲಯಕ್ಕೆ 2.14 ಕೋಟಿ ರೂ. ಕಾಣಿಕೆಯನ್ನು ಭಕ್ತಾದಿಗಳು ಅರ್ಪಿಸಿದ್ದಾರೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇಗುಲದ ಹುಂಡಿಯಲ್ಲಿ 2.14 ಕೋಟಿ ರೂ. ಸಂಗ್ರಹವಾಗಿದ್ದು, ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೆ ದೇವಾಲಯದ 35 ಹುಂಡಿಗಳನ್ನು ತೆರೆದು ಎಣಿಕೆ ಮಾಡಲಾಯಿತು.
ಈ ಸಂದರ್ಭ 2,14,52,984 ರೂ. ನಗದು, 98.600 ಗ್ರಾಂ ಚಿನ್ನ, 4,500 ಕೆ.ಜಿ. ಬೆಳ್ಳಿ ಹಾಗೂ 190 ವಿದೇಶಿ ಕರೆನ್ಸಿಯನ್ನು ಭಕ್ತರು ಸಮರ್ಪಿಸಿದ್ದಾರೆ. ಕಳೆದ ನವೆಂಬರ್ 8ರಂದು ಹುಂಡಿಗಳ ಹಣ ಎಣಿಕೆ ಮಾಡಿದ ಸಂದರ್ಭದಲ್ಲಿ 1.25 ಕೋಟಿ ರೂ. ದೊರೆತಿತ್ತು. ಆದರೆ, ನವೆಂಬರ್ ಅಂತ್ಯದಲ್ಲಿ ನಡೆದ ಚಿಕ್ಕ ಜಾತ್ರಾ ಮಹೋತ್ಸವ ಹಾಗೂ ಕಾರ್ತಿಕ ಮಾಸದ ಸೋಮವಾರಗಳಂದು ಅಸಂಖ್ಯಾತ ಭಕ್ತರು ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರಿಂದ ಹುಂಡಿಯಲ್ಲಿ ಹೆಚ್ಚಿನ ಹಣ ಸಂಗ್ರಹವಾಗಿದೆ ಎಂದು ದೇವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿ ಮಾರ್ಗದರ್ಶನದಲ್ಲಿ ನಡೆದ ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ಮುಜರಾಯಿ ತಹಶೀಲ್ದಾರ್ ವಿದ್ಯುಲ್ಲತ, ತಲಕಾಡು ವೈದ್ಯನಾಥೇಶ್ವರ ದೇವಾಲಯದ ಇಒ ವೆಂಕಟೇಶ್ ಪ್ರಸಾದ್, ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಇಒ ಜಗದೀಶ್ ಕುಮಾರ್, ಎಇಒ ಸತೀಶ್, ಲೆಕ್ಕ ಅಧೀಕ್ಷಕ ಗುರುಮಲ್ಲಯ್ಯ, ಬಿಒಬಿ ಮ್ಯಾನೇಜರ್ ಟಿ ಕೆ ನಾಯಕ್ ಸೇರಿದಂತೆ ಸ್ತ್ರೀಶಕ್ತಿ ಸಂಘದ ಮಹಿಳೆಯರು ಹಾಗೂ ದೇವಾಲಯದ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು.
ಅಂಜನಾದ್ರಿ ದೇಗುಲ ಹುಂಡಿ ಎಣಿಕೆ- 20.36 ಲಕ್ಷ ಕಾಣಿಕೆ ಸಂಗ್ರಹ: ಗಂಗಾವತಿ ತಾಲೂಕಿನ ಚಿಕ್ಕರಾಂಪೂರದ ಅಂಜನಾದ್ರಿ ದೇಗುಲದ ಹುಂಡಿ ಎಣಿಕೆ ಕಾರ್ಯ ಶುಕ್ರವಾರ ನಡೆದಿತ್ತು. ಹುಂಡಿಯಲ್ಲಿ 20.36 ಲಕ್ಷ ರೂಪಾಯಿ ಕಾಣಿಕೆ ಸಂಗ್ರಹವಾಗಿತ್ತು. ಎಣಿಕೆ ವೇಳೆ ನೇಪಾಳದ ಎರಡು ನೋಟು, ಇಂಗ್ಲೆಂಡಿನ ಯೂರೋ, ಜಪಾನ್ ಹಾಗೂ ದುಬೈನ ತಲಾ ಒಂದೊಂದು ನಾಣ್ಯಗಳು ಸೇರಿದಂತೆ ವಿವಿಧ ಮುಖಬೆಲೆಯ ಆರು ನಾಣ್ಯಗಳು ಹುಂಡಿಯಲ್ಲಿ ದೊರೆತಿತ್ತು.
ಕಳೆದ ತಿಂಗಳು ನವೆಂಬರ್ 11 ರಂದು ದೇಗುಲ ಹುಂಡಿ ಎಣಿಕೆ ಮಾಡಿದ ಸಂದರ್ಭದಲ್ಲಿ 27.16 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ಕಳದೆ ತಿಂಗಳಿಗೆ ಹೋಲಿಸಿದರೆ, ಈ ಬಾರಿ 6.80 ಲಕ್ಷ ರೂಪಾಯಿ ಆದಾಯ ಕುಸಿತವಾಗಿದೆ ಎಂದು ದೇಗುಲದ ಆಡಳಿತಾಧಿಕಾರಿ ತಿಳಿಸಿದ್ದರು.
ಇದನ್ನೂ ಓದಿ: ಅಂಜನಾದ್ರಿ ದೇಗುಲ: ₹20.36 ಲಕ್ಷ ಕಾಣಿಕೆ ಸಂಗ್ರಹ; ವಿವಿಧ ದೇಶಗಳ ಕರೆನ್ಸಿ ಪತ್ತೆ