ಮೈಸೂರು: ಮನೆ ದೋಚಲು ಬಂದ ಖದೀಮರು ಪಕ್ಕದ ಮನೆಯವರ ಸಮಯಪ್ರಜ್ಞೆಯಿಂದಾಗಿ ಚಿನ್ನಾಭರಣ ಬಿಟ್ಟು, ಬೆಳ್ಳಿಯನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ. ಪಕ್ಕದ ಮನೆಯಲ್ಲಿ ರಾತ್ರಿ ಸದ್ದು ಆಗುತ್ತಿರುವ ಬಗ್ಗೆ ಎಚ್ಚೆತ್ತ ವ್ಯಕ್ತಿ ಜೋರಾಗಿ ಕೂಗಿದ್ದು, ಕಳ್ಳರು ಕಾಲ್ಕಿತ್ತಿದ್ದಾರೆ. ಇದರಿಂದಾಗಿ ಹೆಚ್ಚಿನ ಪ್ರಮಾಣದ ಕಳವು ತಪ್ಪಿದೆ.
ಕಳವು ನಡೆದ ಬಸವನಗುಡಿಯ ಮನೆ ಮಾಲೀಕರು ಬೆಂಗಳೂರಿಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದೇ ಇರುವುದನ್ನು ಖಚಿತಪಡಿಸಿಕೊಂಡು ಬೀಗ ಒಡೆದು ಒಳನುಗ್ಗಿದ್ದಾರೆ. ಕೊಠಡಿಯಲ್ಲಿದ್ದ ಕಬ್ಬಿಣದ ಕಪಾಟಿನ ಬಾಗಿಲು ಮೀಟಿ ಸುಮಾರು 2.25 ಕೆ.ಜಿ ಬೆಳ್ಳಿ ಕದ್ದಿದ್ದಾರೆ. ಕಪಾಟಿನ ಒಳಗಿದ್ದ ಲಾಕರ್ ತೆರೆಯಲು ಯತ್ನಿಸುತ್ತಿದ್ದಾಗ ಇದರ ಶಬ್ದ ಪಕ್ಕದ ಮನೆಯ ವ್ಯಕ್ತಿಗೆ ಕೇಳಿಸಿದೆ. ಅವರು ಹೊರಬಂದು ಜೋರಾಗಿ ಕೂಗಿದಾಗ ಕಳ್ಳರು ಕೈಗೆ ಸಿಕ್ಕ ಬೆಳ್ಳಿಯೊಂದಿಗೆ ಸ್ಥಳದಿಂದ ಓಡಿ ಹೋಗಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಗೋವಿಂದರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನಿಂದ ಆಗಮಿಸಿದ ಮನೆಯವರಿಂದ ಮಾಹಿತಿ ಪಡೆದಾಗ ಕಪಾಟಿನಲ್ಲಿ 7 ಸಾವಿರ ನಗದು, 2.25 ಕೆ.ಜಿ ಬೆಳ್ಳಿ ಹಾಗೂ 400 ಗ್ರಾಂ ಚಿನ್ನ ಇಟ್ಟಿರುವುದಾಗಿ ತಿಳಿಸಿದ್ದಾರೆ. ಬೆಳ್ಳಿ ಕಪಾಟಿನ ಹೊರಗಿದ್ದುದರಿಂದ ಕಳುವಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಡಿವೈಎಸ್ಪಿ ಗೋವಿಂದರಾಜು, "ನಂಜನಗೂಡಿನ ಬಸವನಗುಡಿ ಬ್ಲಾಕ್ನ ಬಸವೇಶ್ವರ ನಿಲಯದಲ್ಲಿ ಕಳ್ಳತನ ನಡೆದಿದೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ನಮ್ಮ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಂತ್ರಜ್ಞರು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ಮನೆಯಲ್ಲಿ ಒಡೆಯಲ್ಪಟ್ಟಿದ್ದ ಕಪಾಟು ಪರಿಶೀಲನೆ ನಡೆಸಲಾಯಿತು. ಮನೆ ಮಾಲೀಕರಾದ ಪೂರ್ಣಿಮಾ ಅವರ 400 ಗ್ರಾಂ ಚಿನ್ನಾಭರಣ ಹಾಗೆಯೇ ಇತ್ತು. 2.25 ಕೆ.ಜಿ ಬೆಳ್ಳಿ ಆಭರಣಗಳನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ತನಿಖೆ ನಡೆಸುತ್ತಿದ್ದೇವೆ" ಎಂದು ಹೇಳಿದರು.
ಸಾರ್ವಜನಿಕರಿಗೆ ಪೊಲೀಸರ ಮನವಿ: ಸಾರ್ವಜನಿಕರು ಖಾಲಿ ಮನೆಗಳನ್ನು ಬಿಟ್ಟು ಹೋಗುವಾಗ ಹತ್ತಿರದ ಪೊಲೀಸರಿಗೆ ಮಾಹಿತಿ ನೀಡಿ. ಪೊಲೀಸರು ಗಸ್ತು ತಿರುಗುವಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಈ ಮೂಲಕ ಸಂಭಾವ್ಯ ಘಟನೆಗಳನ್ನು ತಪ್ಪಿಸಬಹುದು ಎಂದು ಡಿವೈಎಸ್ಪಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಏಕಕಾಲಕ್ಕೆ 5 ಅಂಗಡಿಗಳಲ್ಲಿ ಕಳ್ಳತನ: ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆ