ಮೈಸೂರು : ಕೋವಿಡ್ ರೋಗಕ್ಕಿಂತ ಕೋವಿಡ್ ವೈರಸ್ನ ಭಯ ಜನರನ್ನು ಮತ್ತಷ್ಟು ಆತಂಕಕ್ಕೀಡುಮಾಡಿದೆ. ಕೋವಿಡ್ ಪ್ರಯೋಗಾಲಯದ ವರದಿಯ ಎಡವಟ್ಟಿನಿಂದ ಗರ್ಭಿಣಿಯೊಬ್ಬಳ ಕುಟುಂಬದವರು ಮಾನಸಿಕ ಯಾತನೆ ಅನುಭವಿಸಿರುವ ಘಟನೆ ತಾಲೂಕಿನ ಉದ್ಬೂರು ಗ್ರಾಮದಲ್ಲಿ ನಡೆದಿದೆ. ಹೆರಿಗೆಗೆಂದು ತವರು ಮನೆಗೆ ಬಂದಿದ್ದ ಗರ್ಭಿಣಿಗೆ ಕೊರೊನಾ ನೆಗೆಟಿವ್ ಇದ್ದರೂ ಪ್ರಯೋಗಾಲಯದ ಸಿಬ್ಬಂದಿ ಪಾಸಿಟಿವ್ ಇದೆ ಎಂದು ತಪ್ಪಾಗಿ ವರದಿ ನೀಡಿದ್ದಾರೆ. ಇದರಿಂದ ಕಳೆದ 1 ವಾರದಿಂದ ಕುಟುಂಬ ಗ್ರಾಮಸ್ಥರಿಂದ ದೂರ ಇದ್ದು ಯಾತನೆಗೊಳಗಾಗಿದೆ.
ಏನಿದು ಘಟನೆ? : ಹೆರಿಗೆಗಾಗಿ ತವರು ಮನೆಗೆ ಗರ್ಭಿಣಿ ಬಂದಿದ್ದರು. ಜುಲೈ 25 ರಂದು ಹೆರಿಗೆ ದಿನಾಂಕ ನೀಡಲಾಗಿತ್ತು. ಆಸ್ಪತ್ರೆಗೆ ದಾಖಲಿಸುವ ಮುನ್ನ ಕೋವಿಡ್ ಪರೀಕ್ಷೆ ಮಾಡಿಸುವಂತೆ ವೈದ್ಯರು ತಿಳಿಸಿದ್ದರು. ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಿ ಮಹಿಳೆ ಸ್ಯಾಂಪಲ್ ಕೊಟ್ಟು ಬಂದಿದ್ದರು. ಆ ಬಳಿಕ ಜುಲೈ 15ರಂದು ಗ್ರಾಮ ಪಂಚಾಯತ್ ಸಿಬ್ಬಂದಿಯೊಬ್ಬರು ಗರ್ಭಿಣಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ತಿಳಿಸಿ ಎಲ್ಲಿಯೂ ಹೋಗದಂತೆ ಸೂಚಿಸಿದ್ದರು. ಆದರೆ, ಬಳಿಕ ಗರ್ಭಿಣಿ ಮನೆಗೆ ಸ್ಯಾಂಪಲ್ ವರದಿ ಬಂದಿದೆ.
ಅದನ್ನು ಗಮನಿಸಿದಾಗ ವರದಿಯಲ್ಲಿ ಉಲ್ಲೇಖಿಸಿರುವ ಸ್ಯಾಂಪಲ್ ಐಡಿ ನಂಬರ್ ತಪ್ಪಾಗಿತ್ತು. ಬಳಿಕ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಹೋಗಿ ಐಡಿ ಪರಿಶೀಲಿಸಿದ್ದಾರೆ. ನಂತರ ವೈದ್ಯರು ಮತ್ತೊಮ್ಮೆ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಗರ್ಭಿಣಿಯ ಕುಟುಂಬಸ್ಥರು ಖಾಸಗಿ ಆಸ್ಪತ್ರೆಯಲ್ಲಿ ಸ್ವ್ಯಾಬ್ ಟೆಸ್ಟ್ ಮಾಡಿಸಿದ್ದಾರೆ. ಜುಲೈ 19 ಜೆಎಸ್ಎಸ್ ಆಸ್ಪತ್ರೆಯಿಂದ ಗರ್ಭಿಣಿಯ ಕೋವಿಡ್ ವರದಿ ನೆಗೆಟಿವ್ ಎಂದು ಬಂದಿದೆ.
ಪ್ರಯೋಗಾಲಯದ ಸಿಬ್ಬಂದಿಯ ಎಡವಟ್ಟಿನಿಂದ ಗರ್ಭಿಣಿಯ ಕುಟುಂಬಸ್ಥರು ಯಾತನೆಗೊಳಗಾಗಿದ್ದಾರೆ. ಇಡೀ ಗ್ರಾಮದಲ್ಲಿ ಗರ್ಭಿಣಿಗೆ ಕೊರೊನಾ ಇದೆ ಎಂದು ಪ್ರಚಾರವಾಗಿದೆ. 6 ದಿನಗಳಿಂದ ತುಂಬಾ ನೊಂದಿದ್ದೇವೆ. ಜನರು ನಮ್ಮನ್ನು ಕಳ್ಳರಂತೆ ನೋಡುತ್ತಾರೆ ಎಂದು ಆ ಕುಟುಂಬಸ್ಥರು ಈಟಿವಿ ಭಾರತದೊಂದಿಗೆ ತಾವು ಅನುಭವಿಸಿದ ಯಾತನೆ ಹೇಳಿಕೊಂಡಿದ್ದಾರೆ.