ಮೈಸೂರು: ಉತ್ಪನ್ನಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಹಾಪ್ಕಾಮ್ಸ್ ನೌಕರರೇ ದೂರು ನೀಡಿ, ತನಿಖೆಗೆ ಆಗ್ರಹಿಸಿದ್ದಾರೆ. ಮೈಸೂರು ಹಾಪ್ಕಾಮ್ಸ್ನಲ್ಲಿ ನಿತ್ಯ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ. ಇಲ್ಲಿ ರೈತರಿಂದ ಯಾವುದೇ ಉತ್ಪನ್ನಗಳನ್ನು ಖರೀದಿ ಮಾಡದೇ, ಬೋಗಸ್ ಬಿಲ್ಗಳನ್ನು ಬೇರೆ ಬೇರೆ ಹೆಸರಿನಲ್ಲಿ ಸೃಷ್ಟಿಸಿ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಹಾಪ್ಕಾಮ್ಸ್ನಲ್ಲಿ ಕೆಲಸ ಮಾಡುತ್ತಿರುವ ನೀಲೇಗೌಡ ಎಂಬುವವರು ಈಟಿವಿ ಭಾರತದ ಜೊತೆ ಮಾತನಾಡಿ, ನಿತ್ಯ ಮೈಸೂರು ಮೃಗಾಲಯದ ಆನೆಗಳಿಗೆ ಕಬ್ಬನ್ನು ಸರಬರಾಜು ಮಾಡಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ಕಬ್ಬಿನ ಬೆಲೆ ಒಂದು ಟನ್ಗೆ 3 ಸಾವಿರ ದಿಂದ 5 ಸಾವಿರ ರೂ. ಇದ್ದು, ಇದಕ್ಕೆ 18 ಸಾವಿರ ರೂ. ಬಿಲ್ ಮಾಡಲಾಗುತ್ತಿದೆ. ಈ ಹಣವನ್ನು ಹಾಪ್ಕಾಮ್ಸ್ನಲ್ಲಿ ಕೆಲಸ ಮಾಡುವ ನೌಕರ ಸರಬರಾಜು ಮಾಡುತ್ತಾನೆ ಎಂದು ಆರೋಪಿಸಿದರು.
ಹೆಂಡತಿ ಮತ್ತು ಮಗಳ ಹೆಸರಿನಲ್ಲಿ ಬಿಲ್ ನೀಡಿ ಹಣ ಲೂಟಿ ಮಾಡುತ್ತಾನೆ. 2015 ರಿಂದ ಇಲ್ಲಿವರೆಗೆ ಕಬ್ಬಿನಲ್ಲೇ ಸುಮಾರು 80 ಲಕ್ಷ ರೂ. ಹಣ ಲೂಟಿ ಮಾಡಿದ್ದಾರೆ. ಅದೇ ರೀತಿ ಬೆಲ್ಲ, ತರಕಾರಿಗಳನ್ನು ಖರೀದಿ ಮಾಡಿ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ, ರಾಜ್ಯಪಾಲರಿಗೆ ಹಾಗೂ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದೇನೆ. ಈ ಬಗ್ಗೆ ನಾನು ನೀಡಿದ ದೂರಿಗೆ ನನಗೆ ಕಿರುಕುಳ ನೀಡುತ್ತಾರೆ ಎಂದು ನೀಲೇಗೌಡ ವಿವರಿಸಿದರು. ಅವ್ಯವಹಾರ ನಡೆಸಿರುವ ಹಾಪ್ಕಾಮ್ಸ್ ನೌಕರರ ವಿರುದ್ಧ ತನಿಖೆ ನಡೆಸಿ, ಅವ್ಯವಹಾರದಿಂದ ಪಡೆದ ಹಣ ವಾಪಸ್ ಕಟ್ಟಿಸಬೇಕೆಂದು ಒತ್ತಾಯಿಸಿದರು.