ಮೈಸೂರು: ಕಾಂಗ್ರೆಸ್ನಲ್ಲಿ ಮೂಲ ಹಾಗೂ ವಲಸಿಗರು ಎಂಬ ಭೇದ ಭಾವವಿಲ್ಲ. ಪಕ್ಷದಲ್ಲಿ ಯಾರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೋ ಅವರು ಪಕ್ಷದ ನಾಯಕರಾಗಬೇಕು. ಲಾಬಿ ಮಾಡುವುದು ಸೂಕ್ತವಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಲ್ಲರ ಒಪ್ಪಿಗೆ ತೆಗೆದುಕೊಂಡು ಆಯ್ಕೆ ಮಾಡೋಣ ಎಂದು ಹೈಕಮಾಂಡ್ ಅಂದುಕೊಂಡಿರಬೇಕು. ಹೀಗಾಗಿ ಎಲ್ಲರ ಮಾಹಿತಿ ಪಡೆದು ನಿರ್ಣಯ ತೆಗೆದುಕೊಳ್ತಾರೆ ಎಂದರು. ಬಿಜೆಪಿ ಎದುರಿಸಲು ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಕೊರತೆ ಇದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಸಾಕಷ್ಟು ಬಲಾಡ್ಯ ನಾಯಕರಿದ್ದಾರೆ. ಬಿಜೆಪಿಯನ್ನು ಸಮರ್ಥವಾಗಿ ಎದುರಿಸ್ತೀವಿ ಎಂದರು.
ಸಚಿವ ಸಂಪುಟ ವಿಸ್ತರಣೆ ಮಾಡುವುದು ಸಿಎಂಗೆ ಬಿಟ್ಟದ್ದು, ಆದರೆ, ಸಂಪುಟ ವಿಸ್ತರಣೆ ಬಹಳ ಸಮಯದಿಂದ ನೆನಗುದ್ದಿಗೆ ಬಿದ್ದಿದೆ. ಹೀಗಾದರೆ ರಾಜ್ಯದ ಅಧಿಕಾರಿಗಳು ಹಾಗೂ ಮಂತ್ರಿಮಂಡಲ ಕೆಲಸ ಮಾಡಲು ಸುಭದ್ರತೆ ಇರುವುದಿಲ್ಲ. ಇದರಿಂದ ಅರಾಜಕತೆ ಸೃಷ್ಟಿಯಾಗಲಿದೆ, ಇಂತಹ ಬೆಳವಣಿಗೆ ಒಳ್ಳೆಯದಲ್ಲ. ವಿಸ್ತರಣೆ ಮಾಡದಿದ್ದರೆ ಇಲ್ಲಿ ಯಾರು ಆಡಳಿತ ಮಾಡಬೇಕು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಬಿಟ್ಟು ಹೋಗುವಾಗ ಆಲೋಚನೆ ಮಾಡಬೇಕಿತ್ತು. ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋಗುವುದು ಸುಲಭವಾಗಬಹುದು. ನಂತರ ಚುನಾವಣೆ ಎದುರಿಸಬೇಕಾಯಿತು. ಇದು ರಾಜಕೀಯದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ. ಪಕ್ಷದಿಂದ ಹೋದವರಿಗೆ ಸಚಿವ ಸ್ಥಾನ ನೀಡಿದರೆ ಅಲ್ಲೆ ಇದ್ದವರಿಗೆ ನಿರಾಶೆಯಾಗಲಿದೆ. ಮಂತ್ರಿಮಂಡಲ ರಚನೆಯಾಗಿದ್ದರು ಅತೃಪ್ತಿಗೆ ಕೊನೆಯಿಲ್ಲ ಎಂದು ಹೇಳಿದರು.
ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಟ್ರೋಲ್ ಮಾಡುವುದು ಉತ್ತಮ ಬೆಳವಣಿಗೆಯಲ್ಲ. ನಾಯಕನ ಮೇಲೆ ವೈಯಕ್ತಿಕ ಟೀಕೆ ಮಾಡುತ್ತಿದ್ದರೆ ಕೊನೆಯಾಗುವುದಿಲ್ಲ. ಯಾವ ಪಕ್ಷದಲ್ಲಿದ್ದರೂ ನೈತಿಕ ತಳಹದಿ ಬೇಕು. ರಾಜಕೀಯ ಟೀಕೆ ಮಾಡಬೇಕು, ವೈಯಕ್ತಿಕ ಟೀಕೆ ಮಾಡಬಾರದು. ಇದಕ್ಕೆ ಜನರೇ ಕಡಿವಾಣ ಹಾಕಬೇಕು ಎಂದರು.