ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ದಸರಾ ವೈಭವ ಕಳೆಗಟ್ಟಿರುವ ಬೆನ್ನಲ್ಲೇ ಸಂಚಾರ ದಟ್ಟಣೆ ಕೂಡ ಹೆಚ್ಚಾಗಿದೆ.
ನಾಳೆ ಆಯುಧ ಪೂಜೆ ಹಾಗೂ ವಿಜಯ ದಶಮಿ ಹಿನ್ನೆಲೆ ರಜೆ ಇರುವ ಕಾರಣ ಮೈಸೂರಿನಲ್ಲಿ ನಡೆಯುವ ದಸರಾ ಸಾಂಸ್ಕೃತಿಕ ವೈಭವ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದು ಸಹಜವಾಗಿ ಸಂಚಾರ ದಟ್ಟಣೆ ಏರ್ಪಟ್ಟಿದೆ. ನಿತ್ಯ ಓಡಾಡುವ ವಾಹನಗಳಿಗೆ ಹೋಲಿಸಿದರೆ ಸದ್ಯ ಮೈಸೂರಿನಲ್ಲಿ ಆರು ಪಟ್ಟು ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಟ್ರಾಫಿಕ್ ನಿಯಂತ್ರಣಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಮೈಸೂರು ಅರಮನೆ ಸುತ್ತಮುತ್ತ, ದೇವರಾಜ ಅರಸು ರಸ್ತೆ, ಅಶೋಕ ರಸ್ತೆ, ಕೆ.ಆರ್. ವೃತ್ತ, ಸಯ್ಯಾಜಿ ರಾವ್ ರಸ್ತೆ, ಬಂಬೂ ಬಜಾರ್ ರಸ್ತೆ, ಬನ್ನಿ ಮಂಟಪ ವೃತ್ತ ಸೇರಿದಂತೆ ಮೈಸೂರು ನಗರದ ಬಹುತೇಕ ಭಾಗದ ರಸ್ತೆಗಳು ವಾಹನಗಳಿಂದ ತುಂಬಿ ತುಳುಕುತ್ತಿದ್ದು, ಇಂಚಿಂಚು ಕದಲುವುದು ಕೂಡ ಕಷ್ಟಕರವಾಗಿ ಪರಿಣಮಿಸಿದೆ. ಸಂಜೆ ನಂತರ ಹೆಚ್ಚು ವಾಹನಗಳು ಸಂಚರಿಸುತ್ತಿದ್ದು, ಬರೀ ಒಂದು ಕಿ.ಮೀ. ಸಂಚರಿಸುವುದಕ್ಕೆ ಗಂಟೆಗಟ್ಟಲೇ ಕಾಯಬೇಕಿದೆ.