ಮೈಸೂರು: ಹಳೆ ಮೈಸೂರು ಭಾಗದಲ್ಲಿ ಧಾರಾಕಾರ ಮಳೆಯಾಗುವ ಲಕ್ಷಣಗಳಿದ್ದು, ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಮನೆಯಿಂದ ಹೊರ ಬರದ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಹೆಚ್.ಡಿ.ಕೋಟೆ, ಪಿರಿಯಾಪಟ್ಟಣ, ಹುಣಸೂರು ತಾಲೂಕುಗಳಲ್ಲಿ ಮಳೆ ಎಡಬಿಡದೇ ಸುರಿಯುತ್ತಿರುವುದರಿಂದ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಪಿರಿಯಾಪಟ್ಟಣ ಹಾಗೂ ಹುಣಸೂರು ತಾಲೂಕುಗಳಲ್ಲಿ ಮಳೆಯಿಂದ 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಜಮೀನುಗಳ ನೀರು ನುಗ್ಗಿ ಅಪಾರ ಬೆಳೆ ನಾಶವಾಗಿದೆ.
ಇನ್ನೂ ಕೇರಳ ಭಾಗದಲ್ಲಿ ಅಧಿಕ ಮಳೆಯಾಗುತ್ತಿರುವ ಹಿನ್ನೆಲೆ ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಇದರಿಂದ ತಗ್ಗು ಪ್ರದೇಶದ ಗ್ರಾಮಗಳ ಜನ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಧಿಕಾರಿ ಜಿ.ಶಂಕರ್ ಸಂದೇಶ ರವಾನಿದ್ದಾರೆ.ಕಬಿನಿ ಜಲಾಶಯಕ್ಕೆ ಅಧಿಕ ನೀರು ಬರುತ್ತಿದ್ದು 84 ಅಡಿ ಗರಿಷ್ಠ ಸಾಮಾರ್ಥ್ಯ ಹೊಂದಿದ್ದು,ಬಹುತೇಕ ಭರ್ತಿಯಾಗಿದೆ.
ಪ್ರಸಿದ್ಧ ಯಾತ್ರ ಕ್ಷೇತ್ರ ಹಾಗೂ ದಕ್ಷಿಣ ಕಾಶಿ ಎಂದು ಹೆಸರಾಗಿರುವ ನಂಜನಗೂಡಿನ ದೇವಸ್ಥಾನದ ಪಕ್ಕದಲ್ಲಿ ಹಾದು ಹೋಗುವ ಕಬಿನಿ ನದಿ ಈಗಾಗಲೇ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.ಇದರಿಂದ ವೆಲ್ಲಿಸ್ಲಿ ಸೇತುವೆ ಬಳಿ ಈಗಾಗಲೇ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು,ಸಂಜೆ ವೇಳೆಗೆ ನೀರು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನೂ ತಾಲೂಕಿನ ಕಪಿಲ ನದಿಯ ಪಕ್ಕದ ಹಳ್ಳಿಗಳಿಗೆ ತಹಶಿಲ್ದಾರ್ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಆದೇಶಿಸಿದ್ದು,ಸಂಜೆ ವೇಳೆಗೆ ಗಂಜಿ ಕೇಂದ್ರವನ್ನು ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ.