ಮೈಸೂರು: ಮಂಡ್ಯದಲ್ಲಿ ಮನೆ ಮಾಡುವುದು ಮುಖ್ಯವಲ್ಲ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಭಾವನೆ ಇರಬೇಕು ಎಂದು ಸಂಸದೆ ಸುಮಲತಾ ಅಂಬರೀಶ್ ಗೃಹ ನಿರ್ಮಾಣದ ಕುರಿತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಲತಾ ಅವರು ಮಂಡ್ಯದಲ್ಲಿ ಮನೆ ಮಾಡಿದರೆ ಸಂತೋಷ. ಇದರಿಂದ ನಮ್ಮ ಮೇಲಿನ ಒತ್ತಡ ಕಡಿಮೆ ಆಗುತ್ತೆ. ಜನರ ಸಮಸ್ಯೆ ಕೇಳಿ ಬಗೆಹರಿಸಲಿ. ಮನೆ ಮಾಡುವುದರಿಂದಲೇ ಎಲ್ಲಾ ಸಮಸ್ಯೆ ಬಗೆಹರಿಯುವುದಿಲ್ಲ. ಮನೆ ಮಾಡಿದ ಬಳಿಕ ಮನೆಯೊಳಗೆ ಕುಳಿತರೆ ಪ್ರಯೋಜನ ಆಗಲ್ಲ. ನಾನು ರಾಮನಗರ, ಚನ್ನಪಟ್ಟಣದಲ್ಲಿ ಮನೆ ಮಾಡಿದ್ದೀನಾ?, ಸಾ.ರಾ.ಮಹೇಶ್ ಕೂಡ ಕೆ.ಆರ್.ನಗರದಲ್ಲಿ ಮನೆ ಮಾಡಿಲ್ಲ. ಜನರೊಂದಿಗೆ ಹೇಗೆ ಸಂಪರ್ಕದಲ್ಲಿ ಇರಬೇಕು ಅನ್ನೋದು ನಮ್ಮ ಮೇಲಿದೆ ಎಂದರು.
'ಕಲೆಕ್ಷನ್ ಮಾಡೋದಕ್ಕೆ ಬಂದ ವ್ಯಕ್ತಿ ಜೆಡಿಎಸ್ ಬಗ್ಗೆ ಮಾತನಾಡಿದ್ದಾನೆ'
ಅರುಣ್ ಸಿಂಗ್ ಹೇಳಿಕೆಗೆ ತಿರುಗೇಟು: ಜೆಡಿಎಸ್ ಮುಳುಗುತ್ತಿರುವ ಹಡಗು ಎಂಬ ರಾಜ್ಯ ಬಿಜೆಪಿ ಉಸ್ತುವಾರಿ ಅರಣ್‌ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿ, ಕರ್ನಾಟಕ ಹಾಗೂ ಇಲ್ಲಿನ ಸ್ಥಳೀಯ ಪಕ್ಷದ ಬಗ್ಗೆ ಆತನಿಗೆ ಮಾಹಿತಿ ಇಲ್ಲ. ಪಾಪ ಅವನಿಗೆ ಏನ್ ಗೊತ್ತು?, ಕಲೆಕ್ಷನ್ ಮಾಡೋದಕ್ಕೆ ಬಂದ ವ್ಯಕ್ತಿ ಜೆಡಿಎಸ್ ಬಗ್ಗೆ ಮಾತನಾಡಿದ್ದಾನೆ. ಜೆಡಿಎಸ್‌ನ ಫ್ಯೂಸ್ ಯಾರೂ ತೆಗೆಯಲು ಸಾಧ್ಯವಿಲ್ಲ. ಕಾರ್ಯಕರ್ತರೆಂಬ ಗ್ರೌಂಡಿಂಗ್ ಭದ್ರವಾಗಿದೆ ಎಂದರು.
'ಜಿ.ಟಿ.ದೇವೇಗೌಡ ಎರಡು ವರ್ಷದ ಹಿಂದೆಯೇ ಜೆಡಿಎಸ್‌ನಿಂದ ದೂರ ಸರಿದಿದ್ದಾರೆ'
ಶಾಸಕ ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿ, 2 ವರ್ಷದ ಹಿಂದೆಯೇ ಜೆಡಿಎಸ್‌ನಿಂದ ದೂರ ಸರಿದಿದ್ದಾರೆ ಎಂದು ಹೇಳಿದ್ದಾರೆ. ನಾವು ಯಾರನ್ನೂ ಹೋಗಿ ಎಂದು ಹೇಳಿಲ್ಲ. ಅವರು ಯಾಕೆ ಜೆಡಿಎಸ್ ತೊರೆಯುತ್ತಿದ್ದಾರೆ ಎಂಬುದು ಜನರಿಗೆ ಹಾಗೂ ಕಾರ್ಯಕರ್ತರಿಗೆ ಗೊತ್ತಿದೆ. ದ್ರಾಕ್ಷಿ ಸಿಗದೇ ಇದ್ದಾಗ ದ್ರಾಕ್ಷಿ ಹುಳಿ ಎಂಬ ನರಿ ಕತೆಯ ಹಾಗೇ ಆಗಿದೆ. ನಾವು ಯಾರಿಗೂ ಅನ್ಯಾಯ ಮಾಡಿಲ್ಲ. ನಾವು ಅವರನ್ನು ಹೋಗಿ ಎಂದು ಹೇಳಿಲ್ಲ. ಪಕ್ಷದ ಮೇಲೆ ನಂಬಿಕೆ ಇದ್ದವರು, ಪಕ್ಷ ಸಂಘಟನೆಗಾಗಿ ಬರುವವರಿಗೆ ತುಂಬು ಹೃದಯದ ಸ್ವಾಗತ ಮಾಡುತ್ತೇನೆ. ಹೋಗುವವರು ಕೂಡ ಹೋಗಬಹುದು ಎಂದರು.
ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಮಿಷನ್ 123 ಎಂಬುದು ನನ್ನ ಯೋಜನೆಯಾಗಿದ್ದು, ಚುನಾವಣೆ ಬಗ್ಗೆ ನೀಲನಕ್ಷೆ ಹಾಗೂ ನಿಯಮಾವಳಿ ರೂಪಿಸಿದ್ದೇನೆ. ಜೆಡಿಎಸ್ ಮೇಲೆ ಜನರಿಗಿರುವ ಒಲವು, ಹುಮ್ಮಸ್ಸು ಕಲಬುರಗಿ ಚುನಾವಣೆಯಲ್ಲಿ ತಿಳಿಯಲಿದೆ ಎಂದು ಹೇಳಿದರು.
ಸೆಪ್ಟೆಂಬರ್ 28 ರಂದು ಮೊದಲ ಪಟ್ಟಿ ಬಿಡುಗಡೆ:
ಸೆಪ್ಟೆಂಬರ್ 28 ರಂದು ಬಿಡದಿ ತೋಟದಲ್ಲಿ ಎಲ್ಲಾ ಜೆಡಿಎಸ್ ಅಭ್ಯರ್ಥಿಗಳಿಗಾಗಿ ಕಾರ್ಯಕ್ರಮ ಏರ್ಪಡಿಸಿದ್ದು, ನಾಡಿನ ಸಮಸ್ಯೆ ಹಾಗೂ ಪರಿಹಾರ, ಪಕ್ಷ ಸಂಘಟನೆ ಹಾಗೂ ಇತರ ವಿಚಾರಗಳ ಕುರಿತು ಮಾಹಿತಿ ನೀಡಿ ಚರ್ಚಿಸಲಾಗುವುದು. ಅಲ್ಲಿ 102 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದು, ಉಳಿದ ಅಭ್ಯರ್ಥಿಗಳನ್ನು ನಂತರ ಆಯ್ಕೆ ಮಾಡಲಾಗುವುದು ಎಂದರು.
'ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರನ್ನೂ ಸರಿಸಮಾನಾಗಿ ನೋಡಬೇಕು':
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಆದೇಶಕ್ಕೆ ಪ್ರತಿಕ್ರಿಯೆ ನೀಡಿದ ಹೆಚ್‌ಡಿಕೆ, ಇದೇ ಕಾರಣಕ್ಕೆ ನಾವು ಮೇಕೆದಾಟು ಯೋಜನೆ ಆರಂಭಿಸಬೇಕು ಎಂದು ಹೇಳುತ್ತಿರುವುದು. ಸಮುದ್ರಕ್ಕೆ ಹರಿದು ಹೋಗುವ ಹೆಚ್ಚುವರಿ ನೀರು ಸಂಗ್ರಹಿಸಬೇಕು.
ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿದ್ದೇವೆ. ನೀರಿನ ಸಂಗ್ರಹ, ಹೇಮಾವತಿ, ಕಬಿನಿ, ಕೆಆರ್ಎಸ್ನಲ್ಲಿ ಎಷ್ಟು ಪ್ರಮಾಣದಲ್ಲಿದೆ? ಸೆಪ್ಟೆಂಬರ್ನಲ್ಲಿ ಮಳೆಯಾಗದಿದ್ದರೆ ರಾಜ್ಯದ ಜನತೆಗೆ ತೊಂದರೆಯಾಗಲಿದೆ. ಕಾವೇರಿ ಮ್ಯಾನೇಜ್ ಮೆಂಟ್ ಅವರು ಅರ್ಥ ಮಾಡಿಕೊಳ್ಳಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರನ್ನೂ ಸರಿಸಮಾನವಾಗಿ ನೋಡಿಕೊಳ್ಳಬೇಕಾಗಿರುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ಹೇಳಿದರು.
'ಜನಾಶೀರ್ವಾದ ಯಾತ್ರೆಯಲ್ಲಿ ಕೋವಿಡ್ ಭೀತಿ ಇಲ್ಲವೆ?':
ಜನಾಶೀರ್ವಾದ ಯಾತ್ರೆ ಮಾಡುತ್ತಾರೆ. ಈ ಯಾತ್ರೆಯಲ್ಲಿ ಯಾವ ಕೊರೊನಾ ನಿಯಮಗಳೂ ಪಾಲನೆಯಾಗಿಲ್ಲ. ಆದರೆ ಸಮಾಜದ ಪವಿತ್ರ ಗೌರಿ ಗಣೇಶ ಹಬ್ಬಕ್ಕೆ ರದ್ದು, ನಿಯಮಗಳು ಅನ್ವಯ ಎಂದು ಹೇಳುತ್ತಾರೆ. ಧರ್ಮದ ಬಗ್ಗೆ ಮಾತನಾಡುವ ಬಿಜೆಪಿ ಪಕ್ಷದ ಬಗ್ಗೆ ಜನರು ತೀರ್ಮಾನಿಸಬೇಕು ಎಂದರು.
ಜಾತಿಗಣತಿ ಬಗ್ಗೆ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಅವರು ತಮ್ಮ ಸರ್ಕಾರವಿದ್ದಾಗಲೇ ಜಾರಿ ಮಾಡಬೇಕಿತ್ತು. ಈಗ ಕಾಂಗ್ರೆಸ್‌ನವರಿಗೆ ಬೇರೆ ಯಾವುದೇ ಸಬ್ಜೆಕ್ಟ್ ಇಲ್ಲದಿರುವ ಕಾರಣ ಈ ವಿಚಾರ ತೆಗೆದಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.